

ಮೈಸೂರು: ಜಲವಿಲ್ಲದ ಜಾಗವಿಲ್ಲ. ಜೀವ ಜಲವಾಗಿರುವ ನೀರು ಮನುಷ್ಯ ಹಾಗೂ ಪ್ರಾಣಿ, ಪಕ್ಷಿಗಳಿಗೆ ಇತ್ತ ವರ. ಇದು ಸೃಷ್ಟಿಸಲಾಗದ ನೈಸರ್ಗಿಕ ಸಂಪತ್ತು. ನೀರಿಗೆ ನೀರೇ ಪರ್ಯಾಯ. ಮಳೆ ಇದಕ್ಕೆ ಮೂಲಾಧಾರ. ಅಮೃತ ಸ್ವರೂಪವಾದ ನೀರು ಜೀವ ಸಂಕುಲಕ್ಕೆ ಆಧಾರ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಹೇಳಿದರು.
ವಿಶ್ವ ಜಲ ದಿನ ಅಂಗವಾಗಿ ಅಪೂರ್ವ ಸ್ನೇಹ ಬಳಗ ಹಾಗೂ ಅರಿವು ಸಂಸ್ಥೆಯಿಂದ ನಗರದ ಚಾಮುಂಡಿಪುರಂನಲ್ಲಿರುವ ಅಪೂರ್ವ ಹೋಟೆಲ್ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೋಟೆಲ್ಗಳಲ್ಲಿ ಗ್ರಾಹಕರು ನೀರನ್ನು ಹಿತಮಿತವಾಗಿ ಬಳಸುವ ಮೂಲಕ ನೀರನ್ನು ಸಂರಕ್ಷಿಸಬೇಕೆಂದು ಮನವಿ ಮಾಡುವ ಭಿತ್ತಿಪತ್ರ ಅಂಟಿಸುವ ಮೂಲಕ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನೀರಿನ ಮಹತ್ವ ಮೂಡಿಸಬೇಕಾದದ್ದು ಹೋಟೆಲ್ಗಳ ಹೊಣೆಗಾರಿಕೆಯೂ ಹೌದು. ದರ ಪಟ್ಟಿಯನ್ನು ಪ್ರಕಟಿಸಿದಂತೆ ನೀರಿನ ಮಹತ್ವದ ಬಗ್ಗೆ ಅರಿವು ಮೂಡಿಸುವತ್ತ ಹೋಟೆಲ್ಗಳು ಹೆಜ್ಜೆ ಇಡಬೇಕಾಗಿದೆ, ಗ್ರಾಹಕರು ಏನಾದರೂ ಅಂದುಕೊಳ್ಳಲಿ ಆದರೆ ನೀರನ್ನು ಮಿತವಾಗಿ ಬಳಸಿ ಎಂಬಂತಹ ಜಾಗೃತಿಯ ಬರಹಗಳು ಹೋಟೆಲ್ ಗೋಡೆಗಳಲ್ಲಿ ಕಾಣಿಸುವಂತೆ ಪ್ರಕಟಿಸುವುದು ಒಳಿತು, ನೀರಿನ ತೀವ್ರತೆಯ ಬಗ್ಗೆ ಗಮನ ಸೆಳೆಯುವ ನಿಟ್ಟಿನಲ್ಲಿ ನೀರಿನ ಮಹತ್ವವಾದ ಜಾಗೃತಿಯ ಪೋಸ್ಟರ್‌ಗಳನ್ನು ಅಂಟಿಸಿ ಇನ್ನು ಹೆಚ್ಚು ಗ್ರಾಹಕರಿಗೆ ಜಾಗೃತಿ ಮೂಡಿಸಲು ಮುಂದಾಗೋಣ ಎಂದು ಹೇಳಿದರು.
ಅಪೂರ್ವ ಸ್ನೇಹ ಬಳಗದ ಅಧ್ಯಕ್ಷ ಅಪೂರ್ವ ಸುರೇಶ್, ಸಾಮಾಜಿಕ ಹೋರಾಟಗಾರ ವಿಕ್ರಮ ಅಯ್ಯಂಗಾರ್, ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಅಧ್ಯಕ್ಷ ಚಂದ್ರಶೇಖರ್, ಮುಖಂಡರಾದ ಪ್ರಸಾದ್ ಜೇಟ್ಟಿ, ಸುರೇಶ್ ಗೋಲ್ಡ್, ಸಂದೀಪ್, ಧರ್ಮೇಂದ್ರ, ನಾಗೇಶ್, ಶ್ರೀಕಾಂತ್ ಕಶ್ಯಪ್, ದಯಾನಂದ್ ಇತರರು ಇದ್ದರು.