

ಮೇಲುಕೋಟೆ : ನಾಗರಿಕತೆ ಆರಂಭವಾಗಲು ಮೂಲ ಕೇಂದ್ರಗಳಾದ ಜಲ ಮೂಲಗಳನ್ನು ಸಂರಕ್ಷಿಸಿಟ್ಟುಕೊಳ್ಳುವುದು ನಮ್ಮ ಜವಾಬ್ದಾರಿ ಎಂದು ಬೆಂಗಳೂರಿನ ದಯಾನಂದಸಾಗರ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗ ಮುಖ್ಯಸ್ಥ ಪ್ರೊ. ರಾಮರಾಜು ಹೇಳಿದರು.
ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿ ಬೆಂಗಳೂರು ದಯಾನಂದಸಾಗರ ಇಂಜಿನಿಯರಿಂಗ್ ಕಾಲೇಜಿನ ಸಮುದಾಯಸೇವಾ ಸಮಿತಿ, ಆದಿಚುಂಚನಗಿರಿ ಐಟಿಐ ಕಾಲೇಜು ಮತ್ತು ಗ್ರಾಪಂ ಸಹ ಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ನೀರು ಮತ್ತು ನೈರ್ಮಲ್ಯ,ಆರೋಗ್ಯ ಪರಿಸರ ರಕ್ಷಣೆ ಜಾಗೃತಿಕಾರ್ಯಕ್ರಮದಲ್ಲಿ ಪ್ರಧಾನ ಉಪನ್ಯಾಸ ನೀಡಿದರು. ನಾಗರಿಕತೆಯ ಉಗಮದ ಸ್ಥಳಗಳಾದ ಸಿಂಧು, ಗಂಗಾ ಸೇರಿದಂತೆ ಭರತಖಂಡದ ಬಹುತೇಕ ನದಿಗಳನ್ನು ಕಲುಷಿತಗೊಳಿಸಿದ್ದೇವೆ. ನಗರೀಕರಣದ ಹೆಸರಲ್ಲಿ ಕೆಲವು ನದಿಗಳೇ ಬತ್ತಿಹೋಗಿವೆ. ಈಗಾದರೂ ಎಚ್ಚೆತ್ತುಕೊಳ್ಳದಿದ್ದರೆ ಮುಂಬರುವ ದಿನಗಳಲ್ಲಿ ನೀರಿಗಾಗಿ ನಾವು ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಅಭಿಯಾನ ನಿರಂತರವಾಗಿರಲಿ: ವಿದ್ಯಾರ್ಥಿಗಳು ಸಮುದಾಯದಲ್ಲಿ ಪರಿಸರ ಜಾಗೃತಿ ಮೂಡಿಸುವ ಕಾರ್ಯವನ್ನು ನಿರಂತರವಾಗಿ ಮಾಡಬೇಕು. ಮೇಲುಕೋಟೆಯಂಥ ಪವಿತ್ರ ಸ್ಥಳಗಳಲ್ಲಿ ಸ್ವಚ್ಛತಾ ಅಭಿಯಾನಗಳು ನಿರಂತರವಾಗಿ ನಡೆಯಬೇಕು. ನಾಗರಿಕರು ಮತ್ತು ಭಕ್ತರಲ್ಲಿ ನೈರ್ಮಲ್ಯದ ಜಾಗೃತಿ ಮೂಡಬೇಕು ಎಂದರು. ರಾಮಾನುಜರ ಕರ್ಮಭೂಮಿ ಮೇಲುಕೋಟೆಯ ನಿರ್ಮಿತಿ, ವಾಸ್ತುಶಿಲ್ಪ ಮತ್ತು ಸ್ಮಾರಕಗಳು ಆಧುನಿಕ ಇಂಜಿನಿಯರಿಂಗ್ ತಂತ್ರಜ್ಞಾನಕ್ಕೆ ಸವಾಲೆಸೆಯುವಂತಿವೆ. ಹಾಗಾಗಿ ದಯಾನಂದಸಾಗರ ಕಾಲೇಜು ಸಿವಿಲ್ ಇಂಜಿನಿಯರಿಂಗ್ ವಿಭಾಗವು ವಿದ್ಯಾರ್ಥಿಗಳಿಗೆ ಸಮೀಕ್ಷಾ ಕ್ಯಾಂಪ್‌ಗಳನ್ನು ಇಲ್ಲೇ ಆಯೋಜಿಸುತ್ತಾ ಬಂದಿದೆ ಎಂದು ಪ್ರೊ. ರಾಮರಾಜು ವಿವರಿಸಿದರು.
ಜ್ಞಾನ ವಿಸ್ತರಣೆಯಾಗಲಿ: ಆದಿಚುಂಚನಗಿರಿ ಶಾಖಾ ಮಠದ ಶ್ರೀ ಪುರುಷೋತ್ತಮಾನಂದ ನಾಥ ಸ್ವಾಮೀಜಿ ಮಾತನಾಡಿ, ಮೇಲುಕೋಟೆಯಲ್ಲಿ ಆದಿಚುಂಚನಗಿರಿಯ ಮೂಲಮಠವೂ ಇದೆ. ತಮಿಳುನಾಡಿನಿಂದ ತೊಂಡನೂರಿಗೆ ಬಂದ ರಾಮಾನುಜರು ಮೇಲುಕೋಟೆಯಲ್ಲಿ ನೆಲೆನಿಂತು ಕರ್ನಾಟಕದ ಧಾರ್ಮಿಕ, ಸಾಂಸ್ಕೃತಿಕ ಪರಂಪರೆಗೆ ಅಭೂತಪೂರ್ವಕೊಡುಗೆ ನೀಡಿದ್ದಾರೆ. ಇಂತಹ ಪುಣ್ಯಭೂಮಿಯಲ್ಲಿ ಸಿವಿಲ್ ಇಂಜಿನಿಯರಿಂಗ್ ಕಲಿಕಾರ್ಥಿಗಳ (ಸರ್ವೇಕಾರ್ಯ ನಡೆಸುವ ಮೂಲಕ) ಜ್ಞಾನ ವಿಸ್ತರಣೆಯಾಗಲಿ ಎಂದರು.