

ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಧರ್ಮಸ್ಥಳ, ಯುನಿಸೆಫ್ ಹೈದರಾಬಾದ್ ಜಂಟಿ ಆಶ್ರಯದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಂತೆ, ನೀರು ಉಳಿಸಿ ಭವಿಷ್ಯದ ನೀರು-ಇಂದಿನ ಕಾಳಜಿ ಮಹಾ ಅಭಿಯಾನದ ಕರಪತ್ರವನ್ನು ಯೋಜನಾಧಿಕಾರಿ ಸುರೇಂದ್ರ ಬಿಡುಗಡೆಗೊಳಿಸಿದರು.
ಶುದ್ಧ ನೀರು ಯಾಕೆ ಬೇಕು? ನೀರಿನ ನಿರ್ವಹಣೆಯ ಅವಶ್ಯಕತೆ ಏನಿದೆ? ಪ್ರಸ್ತುತ ರಾಜ್ಯದಲ್ಲಿ ಮತ್ತು ಜಿಲ್ಲೆಯಲ್ಲಿ ನೀರಿನ ಪರಿಸ್ಥಿತಿ ಹೇಗಿದೆ? ನೀರಿನ ಸಂರಕ್ಷಣೆಯಲ್ಲಿ ಜನರ ಹೊಣೆಗಾರಿಕೆ ಏನು? ಸಣ್ಣಮಟ್ಟದಲ್ಲಿ ಹೇಗೆ ನೀರನ್ನು ಉಳಿತಾಯ ಮಾಡಬಹುದು? ಎಂದು ವಿವರಿಸಲಾಯಿತು. ಮನೆಯಲ್ಲಿ ಇಂಗುಗುಂಡಿ ನಿರ್ಮಾಣ ಮಾಡಿ ಮನೆಯ ಸುತ್ತಮುತ್ತಲಿನ ನೀರನ್ನು ಭೂಮಿಗೆ ಇಂಗಿಸುವಂತೆ ಮಾಡುವುದು. ಸಮುದಾಯದ ಭಾಗಗಳಲ್ಲಿ ಇಂಗುಗುಂಡಿ ನಿರ್ಮಿಸಿ, ಆ ನೀರನ್ನು ಭೂಮಿಗೆ ಇಂಗಿಸುವಂತೆ ಮಾಡುವುದು. ಟ್ಯಾಪ್ ತೋರದಂತೆ ನೋಡಿಕೊಳ್ಳುವುದು, ಮನೆಯಲ್ಲಿ ಹಲ್ಲುಜ್ಜುವಾಗ, ಶೇವಿಂಗ್ ಮಾಡುವಾಗ, ಸ್ನಾನ ಮಾಡುತ್ತಿರುವಾಗ ಟ್ಯಾಪ್ನಲ್ಲಿ ನಿರಂತರ ನೀರು ಸೋರದಂತೆ ನೋಡುತ್ತಿರುವುದು, ಗಿಡಗಳಿಗೆ ಯಥೇಚ್ಛ ನೀರು ನೀಡದೆ ಇರುವುದು ಮುಂತಾದ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು. ಕೃಷಿ ಮೇಲ್ವಿಚಾರಕ ರಾಮ್ ಕುಮಾರ್, ಕಚೇರಿ ಮ್ಯಾನೇಜರ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.