ಮೀನು ತಳಿಗಳ ರಕ್ಷಣೆಗೆ ಸರ್ಕಾರ ಬದ್ಧ; ವೇಲ್ ಶಾರ್ಕ್ ಸಂರಕ್ಷಣಾ ಅಭಿಯಾನಕ್ಕೆ ಚಾಲನೆ ನೀಡಿ ಸಚಿವ ಅಂಗಾರ

mng-aug30-fish1
Published on

ಮಂಗಳೂರು: ಅಪರೂಪದ ಮೀನು ತಳಿಗಳ ರಕ್ಷಣೆಗೆ ಸರ್ಕಾರ ಬದ್ಧವಾಗಿದ್ದು, ವೇಲ್ ಶಾರ್ಕ್ ಸಂರಕ್ಷಣಾ ಅಭಿಯಾನಕ್ಕೆ ಸರ್ಕಾರದ ಮೀನುಗಾರಿಕಾ ಇಲಾಖೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಎಸ್.ಅಂಗಾರ ಹೇಳಿದರು.
ಮಂಗಳವಾರ ನಗರದ ಮಿಲಾಗ್ರಿಸ್ ಸಭಾಂಗಣದಲ್ಲಿ ವಲ್ಡ್ ಲೈಫ್ ಟ್ರಸ್ಟ್ ಆಫ್ ಇಂಡಿಯಾ ವತಿಯಿಂದ ಕರ್ನಾಟಕ ಸಮುದ್ರ ತೀರದಲ್ಲಿ ಕೈಗೊಳ್ಳಲಾಗುವ ವೇಲ್ ಶಾರ್ಕ್ ಸಂರಕ್ಷಣಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಕೃತಿ ನಮಗೆ ಎಲ್ಲವನ್ನೂ ಕೊಟ್ಟಿದೆ. ಆದರೆ ನಾವು ಪ್ರಕೃತಿ ಮರಳಿ ಏನು ಕೊಡುತ್ತಿದ್ದೇವೆ ಎಂದು ಪ್ರಶ್ನೆ ಮಾಡಬೇಕಿದೆ. ಮಾನವನ ಕೆಲವೊಂದು ಕೃತ್ಯಗಳಿಂದ ಶಾರ್ಕ್‌ಗಳಂತಹ ಬೃಹತ್ ಮೀನುಗಳೇ ನಶಿಸಿ ಹೋಗುವಂತಹ ಸ್ಥಿತಿಗೆ ತಲುಪಿದೆ ಎಂದರೆ ಆತಂಕ ಪಡಬೇಕಾದ ವಿಚಾರ. ಈ ನಿಟ್ಟಿನಲ್ಲಿ ಡಬ್ಲುೃಟಿಐ ಉತ್ತಮ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ ಎಂದರು.
ಡಬ್ಲುೃಟಿಐ ಸ್ಥಾಪಕ ಟ್ರಸ್ಟಿ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ವಿವೇಕ್ ಮೆನನ್ ಮಾತನಾಡಿ, 2002ನೇ ಇಸವಿಗಿಂತ ಮೊದಲು ಗುಜರಾತ್ ರಾಜ್ಯವೊಂದರಲ್ಲೇ ವರ್ಷಕ್ಕೆ 500ರಷ್ಟು ವೇಲ್ ಶಾರ್ಕ್‌ಗಳು ಕೊಲ್ಲಲ್ಪಡುತ್ತಿತ್ತು. ಆದರೆ ಅಭಿಯಾನ ಆರಂಭವಾದ ಬಳಿಕ ಸುಮಾರು 850 ವೇಲ್ ಶಾರ್ಕ್‌ಗಳನ್ನು ಮೀನಗಾರರು ಮರಳಿ ಸಮುದ್ರಕ್ಕೆ ಬಿಟ್ಟಿದ್ದಾರೆ. ಕೇರಳ, ಕರ್ನಾಟಕ, ಲಕ್ಷದ್ವೀಪ ಸಮುದ್ರವೂ ಶಾರ್ಕ್‌ಗೆ ಪೂರಕವಾಗಿದ್ದು, ಆದ್ದರಿಂದ ಈ ರಾಜ್ಯಗಳಲ್ಲೂ ಅಭಿಯಾನ ಆರಂಭಿಸಲಾಗುತ್ತಿದೆ ಎಂದರು.
ಮೀನುಗಾರಿಕಾ ಕಾಲೇಜು ಡೀನ್ ಡಾ.ಎಚ್.ಎನ್. ಆಂಜನೇಯಪ್ಪ, ವಲಯ ಅರಣ್ಯಾಧಿಕಾರಿಗಳಾದ ಕ್ಲಿಫರ್ಡ್ ಲೋಬೋ, ಸುಬ್ಬಯ್ಯ ನಾಯ್ಕ, ಟ್ರಾಲ್ ಬೋಟ್ ಯೂನಿಯನ್ ಅಧ್ಯಕ್ಷ ಚೇತನ್ ಬೆಂಗ್ರೆ, ಮೀನುಗಾರ ಮುಖಂಡ ಅಬೂಬಕ್ಕರ್ ಉಪಸ್ಥಿತರಿದ್ದರು.
ಡಬ್ಲುೃಟಿಐ ನಿರ್ದೇಶಕ, ಸಂವಹನ ಮತ್ತು ಅಭಿಯಾನ ವಿಭಾಗ ಮುಖ್ಯಸ್ಥ ಆನಂದ ಬ್ಯಾನರ್ಜಿ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net