

ಶಿವಮೊಗ್ಗ: ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಆಟದ ಮೈದಾನವನ್ನು ಕಾನೂನು ಬಾಹಿರವಾಗಿ ವಕ್ಫ್ ಖಾತೆ ಮಾಡಿರುವುದನ್ನು ರದ್ದುಪಡಿಸಿ, ಮಹಾನಗರ ಪಾಲಿಕೆ ಆಯುಕ್ತರು ಯಾರ ಪ್ರಭಾವಕ್ಕೂ ಒಳಗಾಗದೆ ಪಾಲಿಕೆ ಆಸ್ತಿಯಾಗಿ ಉಳಿಸಿಕೊಳ್ಳಬೇಕು ಎಂದು ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದರು.
ಆಟದ ಮೈದಾನಕ್ಕೆ ಸಂಬಂಧಿಸಿ ರಾಷ್ಟ್ರಭಕ್ತರ ಬಳಗ ಈಗಾಗಲೇ ಪ್ರಮುಖ ದಾಖಲೆಗಳೊಂದಿಗೆ ಪಾಲಿಕೆ ಆಯುಕ್ತರು, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ. ಆ ಜಾಗದ ಖಾತೆಯನ್ನು ನಿಯಮಬಾಹಿರವಾಗಿ ವಕ್ಫ್ ಬೋರ್ಡ್ ಹೆಸರಿಗೆ ಮಾಡಿದ್ದನ್ನು ಪ್ರಶ್ನಿಸಿ, ಮರು ಪರಿಶೀಲಿಸುವಂತೆ ಮನವಿ ಸಲ್ಲಿಸಿದ್ದು, ಜು.21ರಂದು ದಾಖಲೆಗಳೊಂದಿಗೆ ಪಾಲಿಕೆಗೆ ಮತ್ತೊಮ್ಮೆ ಮನವಿ ಸಲ್ಲಿಸಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆಯುಕ್ತರು ಯಾವುದೇ ಕ್ರಮ ಕೈಗೊಳ್ಳದ ಕಾರಣ ಹೈಕೋರ್ಟ್ ಮೆಟ್ಟಿಲೇರಿತ್ತು. ನ್ಯಾಯಾಲಯ ಈಗ ಎಂಟು ವಾರದೊಳಗೆ ಆ ಜಾಗದ ಬಗ್ಗೆ ದಾಖಲಾತಿ ನೀಡಬೇಕು ಎಂದು ತಿಳಿಸಿದೆ. ಕೊಟ್ಟ ಅವಧಿ ಜು.17ಕ್ಕೆ ಮುಗಿದಿದೆ. ಹಿಂದೆ ಸಲ್ಲಿಸಿದ ದಾಖಲೆಗಳಲ್ಲದೆ ಮತ್ತೆ ಜು.1ರಂದು ನಾವು ಆಯುಕ್ತರಿಗೆ ಹೆಚ್ಚುವರಿ ದಾಖಲೆಗಳನ್ನು ನೀಡಿದ್ದೆವು ಎಂದರು.
ನಾವು ನೀಡಿದ ದಾಖಲೆ ಪ್ರಕಾರ ಹಕ್ಕುಗಾರಿಕೆ ಸಾಬೀತುಪಡಿಸುವ ದಾಖಲೆಗಳು ವಕ್ಫ್ ಮಂಡಳಿ ಬಳಿ ಇಲ್ಲ. ಕಾನೂನು ಬಾಹಿರವಾಗಿ ಖಾತೆ ಮಾಡಿರುವುದನ್ನು ರದ್ದುಪಡಿಸಬೇಕು ಮತ್ತು ಕಾನೂನು ಬಾಹಿರವಾಗಿ ಖಾತೆ ಮಾಡಿಕೊಟ್ಟವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಈ ಜಾಗವನ್ನು ಪಾಲಿಕೆ ಆಸ್ತಿಯನ್ನಾಗಿ ಉಳಿಸಬೇಕು. ಇಷ್ಟಾದ ಮೇಲೂ ಅದನ್ನು ಪಾಲಿಕೆ ಸ್ವತ್ತಾಗಿ ಉಳಿಸದೆ ಹೋದರೆ ಹಿಂದು ಸಮಾಜ ಸುಮ್ಮನಿರಲ್ಲ. ದೊಡ್ಡ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರಮುಖರಾದ ಮಹಾಲಿಂಗ ಶಾಸ್ತ್ರಿ, ಸತ್ಯನಾರಾಯಣ, ವಾಗೇಶ್, ಕುಬೇರಪ್ಪ, ಆ.ಮ.ಪ್ರಕಾಶ್, ಇ.ವಿಶ್ವಾಸ್ ಸುದ್ದಿಗೋಷ್ಠಿಯಲ್ಲಿದ್ದರು.