

ಕೊಳ್ಳೇಗಾಲ: ಈ ವರ್ಷದ ತಾಪಮಾನ ನಮಗೂ ಹಾಗೂ ಪರಿಸರದ ಮೇಲೆ ಉಂಟಾಗಿರುವ ದುಷ್ಪರಿಣಾಮಗಳಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಟಿ.ಸಿ.ಶ್ರೀಕಾಂತ್ ಹೇಳಿದರು.
ಪಟ್ಟಣದ ಎಂಜಿಎಸ್‌ವಿ ಕಾಲೇಜು ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಬುಧವಾರ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಸಾರ್ವಜನಿಕ ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ, ರೋಟರಿ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಪ್ಲಾಸ್ಟಿಕ್ ನಿರ್ಮೂಲನಾ ಜಾಗೃತಿ ಜಾಥಾ ಮತ್ತು ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಈಗಲಾದರೂ ಪರಿಸರವನ್ನು ಉಳಿಸಿಕೊಳ್ಳಲು ನಾವು ಶ್ರಮಿಸಬೇಕಿದೆ. ಪರಿಸರ ಸ್ವಚ್ಛತೆ, ಪ್ಲಾಸ್ಟಿಕ್ ನಿರ್ಮೂಲನೆ ಕಡೆಗೆ ಹೆಚ್ಚು ಗಮನಹರಿಸಬೇಕು. ಮರ ಗಿಡಗಳನ್ನು ಪೋಷಿಸಲು ಹೆಚ್ಚು ಆದ್ಯತೆ ನೀಡಬೇಕು. ಹಿರಿಯರು ಬಿಟ್ಟು ಹೋದ ಪರಿಸರವನ್ನು ಮುಂದಿನ ಪೀಳಿಗೆಗೆ ಉಳಿಸಲು ನಾವೆಲ್ಲರೂ ಮುಂದಾಗ ಬೇಕಾಗಿದೆ ಎಂದರು.
ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ, ಅರಣ್ಯ ನಾಶ ಮತ್ತು ಜೀವ ವೈವಿಧ್ಯದ ನಷ್ಟದ ಬಗ್ಗೆ ಜಾಗೃತಿ ಮೂಡಿಸುವುದೇ ವಿಶ್ವ ಪರಿಸರ ದಿನಾಚರಣೆಯ ಮಹತ್ವದ ಸಂದೇಶವಾಗಿದ್ದು, ಪ್ರತಿಯೊಬ್ಬರು ಪರಿಸರದ ರಕ್ಷಣೆಗೆ ಮುಂದಾಗಬೇಕಿದೆ ಎಂದರು.
ಡಿಸಿಎಫ್ ಸಂತೋಷ್ ಕುಮಾರ್ ಮಾತನಾಡಿ, ಪ್ರತಿಯೊಬ್ಬ ಪ್ರಜೆಗೂ ಉತ್ತಮ ಪರಿಸರವನ್ನು ನೀಡುವುದು ಸರ್ಕಾರದ ಕರ್ತವ್ಯ. ಹಾಗೆಯೇ ಉತ್ತಮ ಪರಿಸರವನ್ನು ಬಯಸುವ ಪ್ರತಿಯೊಬ್ಬ ಪ್ರಜೆಯು ಉತ್ತಮ ಪರಿಸರ ನಿರ್ಮಾಣದಲ್ಲಿ ತಮ್ಮ ಪಾತ್ರ ಅರಿತು ಪರಿಸರಕ್ಕೆ ಪೂರಕವಾಗಿ ಸಹಕಾರ ಮಾಡಬೇಕಿದೆ ಎಂದರು. ಇದಕ್ಕೂ ಮುನ್ನ ಅರಣ್ಯ ಇಲಾಖೆ ಸಿಬ್ಬಂಇ, ಸ್ವಯಂ ಸೇವಾ ಸಂಸ್ಥೆಗಳ ಸದಸ್ಯರು, ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಎಸ್.ವಿ.ಕೆ ಕಾಲೇಜು ಮುಂಭಾಗದಿಂದ ಪರಿಸರ ಜಾಗೃತಿ ಜಾಥಾ ನಡೆಸಿದರು. ನಂತರ, ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಜಾಥಾ ಎಂಜಿಎಸ್‌ವಿ ಕಾಲೇಜು ಮೈದಾನ ತಲುಪಿತು.
ಹಿರಿಯ ಸಿವಿಲ್ ನ್ಯಾಯಾಧೀಶೆ ಸುನೀತಾ, ಪ್ರಧಾನ ಸಿವಿಲ್ ನ್ಯಾಯಾಧೀಶೆ ಎಂ.ಎನ್.ನಂದಿನಿ, ವಕೀಲರ ಸಂಘದ ಅಧ್ಯಕ್ಷ ಸಿ.ರವಿ, ಉಪಾಧ್ಯಕ್ಷೆ ಸಿ.ಆರ್.ನಿರ್ಮಲಾ, ಹಿರಿಯ ವಕೀಲ ಡಿ.ವೆಂಕಟಾಚಲ, ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಸಿ. ಸುರೇಂದ್ರ, ಸಹಾಯಕ ಅರಣ್ಯ ಅಧಿಕಾರಿ ಬಿ.ಎಸ್.ಶಶಿಧರ್, ಆರ್‌ಎಫ್‌ಒ ಯುಜಿ ಭರತ್, ಬಿ.ಎಸ್.ವಾಸು, ಕೆ.ಪಿ.ಪ್ರಫುಲ್ಲಾ, ಬಿಇಒ ಎಂ. ಮಂಜುಳಾ, ರೋಟರಿ ಕ್ಲಬ್ ಸಂಸ್ಥೆ ಪದಾಧಿಕಾರಿಗಳಿದ್ದರು.