ಲಿಂಗಸುಗೂರಲ್ಲೇ ಜಿಲ್ಲಾ ಮಟ್ಟದ ಆಸ್ಪತ್ರೆ ಉಳಿಸಿ

LNG mlc meet cm
ಬೆಂಗಳೂರಲ್ಲಿ ಸಿಎಂಗೆ ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಪುರ ನೇತೃತ್ವದ ನಿಯೋಗ ಮನವಿ ಸಲ್ಲಿಸಿತು. ಎಂಎಲ್ಸಿ ಶರಣಗೌಡ ಬಯ್ಯಪುರ, ನಯೋಪ್ರಾ ಅಧ್ಯಕ್ಷ ಭೂಪನಗೌಡ ಪಾಟೀಲ್, ಬಸವರಾಜಗೌಡ ಗಣೇಕಲ್ ಇತರರಿದ್ದರು.
Published on

ಲಿಂಗಸುಗೂರು: ಮಂಜೂರಾಗಿದ್ದ ಜಿಲ್ಲಾ ಮಟ್ಟದ 200 ಹಾಸಿಗೆ ಆಸ್ಪತ್ರೆಯನ್ನು ಲಿಂಗಸುಗೂರಲ್ಲಿಯೇ ಉಳಿಸಬೇಕೆಂದು ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಪುರ ನೇತೃತ್ವದ ನಿಯೋಗ ಗುರುವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಮಾಡಿದ್ದು, ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ ಎಂದು ಎಂಎಲ್ಸಿ ಶರಣಗೌಡ ಪಾಟೀಲ್ ಬಯ್ಯಪುರ ತಿಳಿಸಿದ್ದಾರೆ.

ಲಿಂಗಸುಗೂರು ವಿಧಾನಸಭೆ ಎಸ್ಸಿ ಮೀಸಲು ಕ್ಷೇತ್ರವಾಗಿದ್ದು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿದ್ದು ಅಭಿವೃದ್ಧಿ ಕುಂಠಿತಗೊಂಡಿದೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿತ್ಯ 400 ರಿಂದ 500 ಜನ ಹೊರ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ಮೂರು ಜಿಲ್ಲೆಗಳ ಕೇಂದ್ರವಾಗಿದೆ.

ಯಾದಗಿರಿ, ಸುರಪುರ, ಹುಣಸಗಿ, ಮುದ್ದೇಬಿಹಾಳ, ನಾಲತವಾಡ, ಹುನಗುಂದ ತಾಲೂಕುಗಳ ರೋಗಿಗಳು ಲಿಂಗಸುಗೂರು ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುತ್ತಾರೆ. 2024ರ ಸೆ.17ರಂದು ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನೂರು ಹಾಸಿಗೆ ಆಸ್ಪತ್ರೆಯನ್ನು 200 ಹಾಸಿಗೆ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿ ಘೋಷಣೆ ಮಾಡಲಾಗಿತ್ತು ಅದಕ್ಕಾಗಿ 6 ಎಕರೆ ಸರ್ಕಾರಿ ಜಾಗ ಗುರುತಿಸಲಾಗಿದೆ.

ಆದರೆ, ಏಕಾಏಕಿ ಸಿಂಧನೂರಿಗೆ ಸ್ಥಳಾಂತರ ಮಾಡಲಾಗಿದೆ. ಸಂಘ ಸಂಸ್ಥೆಗಳು, ಸಂಘಟನೆಗಳು, ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದಾರೆ. ಆದ್ದರಿಂದ ಲಿಂಗಸುಗೂರಲ್ಲಿಯೇ ಆಸ್ಪತ್ರೆ ಉಳಿಸುವಂತೆ ಮಾಜಿ ಸಚಿವ ಅಮರೇಗೌಡ ಬಯ್ಯಪುರ ಅವರು ಮನವಿ ಮಾಡಿದ್ದು, ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಶರಣಗೌಡ ಪಾಟೀಲ್ ಬಯ್ಯಪುರ ತಿಳಿಸಿದ್ದಾರೆ.

ನಿಯೋಗದಲ್ಲಿ ಎಂಎಲ್ಸಿ ಶರಣಗೌಡ ಬಯ್ಯಪುರ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭೂಪನಗೌಡ ಪಾಟೀಲ್, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಬಸವರಾಜಗೌಡ ಗಣೇಕಲ್, ಜಿಪಂ ಮಾಜಿ ಅಧ್ಯಕ್ಷ ಗುಂಡಪ್ಪ ನಾಯಕ, ಸೋಮಶೇಖರ ಐದನಾಳ, ಲಾಲಪ್ಪ ರಾಠೋಡ, ಡಿ.ಜಿ.ಗುರಿಕಾರ, ಮಾಳಿಂಗರಾಯ, ಈರಪ್ಪ ಗೌಡೂರು, ಲಿಂಗನಗೌಡ, ಅನಿಲ್‌ಭೂಶೆಟ್ಟಿ, ಅಶೋಕಗೌಡ ಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net