

ವಿಜಯವಾಣಿ ಸುದ್ದಿಜಾಲ ಚಿತ್ರದುರ್ಗ
ಎಐಸಿಸಿ ಎಸ್‌ಸಿ, ಎಸ್‌ಟಿ, ಒಬಿಸಿ, ಆರ್‌ಜಿಪಿಆರ್‌ಎಸ್, ಕಾರ್ಮಿಕ, ಅಸಂಘಟಿತ ಕಾರ್ಮಿಕ, ಕಿಸಾನ್ ಹಾಗೂ ಮೀನುಗಾರರ ವಿಭಾಗದಿಂದ ಡಿಸೆಂಬರ್ 2ರವರೆಗೆ ಕಾಂಗ್ರೆಸ್ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೊದಲ ಹಂತದಲ್ಲಿ ಹಮ್ಮಿಕೊಂಡಿರುವ ಭಾರತ್ ಜೋಡೊ, ಸಂವಿಧಾನ ಬಚಾವೋ ಪಾದಯಾತ್ರೆಗೆ ಸೋಮವಾರ ಮದಕರಿಪುರದಲ್ಲಿ ಚಾಲನೆ ದೊರೆಯಿತು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು. ಮದಕರಿಪುರದಿಂದ-ಕನಕ ವೃತ್ತದವರೆಗೆ ಯಾತ್ರೆ ಸಾಗಿತು. ಡಿ.ಕೆ.ಶಿವಕುಮಾರ್, ನಗರದ ಪಕ್ಷದ ಕಚೇರಿ ಬಳಿ ಯಾತ್ರೆಯನ್ನು ಸೇರಿಕೊಂಡರು. ಯಾತ್ರೆ ಮಾರ್ಗದಲ್ಲಿರುವ ಮಹ ನೀಯರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.
ಕನಕ ವೃತ್ತದಲ್ಲಿ ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಶಿವಕುಮಾರ್, ಭಾರತ್ ಜೋಡೋ ಯಾತ್ರೆಯಿಂದ ಪಕ್ಷಕ್ಕೆ ದೊರಕಿರುವ ಶಕ್ತಿಯನ್ನು ಕಾಪಾಡಿಕೊಳ್ಳಲು ಎಲ್ಲರೂ ಒಗ್ಗಟ್ಟಾಗಿ ಬೂತ್ ಮಟ್ಟದಲ್ಲಿ ಪಾದಯಾತ್ರೆ ನಡೆಸಬೇಕು ಎಂದು ಮುಖಂಡರು, ಕಾರ‌್ಯಕರ್ತರಿಗೆ ಸೂಚಿಸಿದರು.
ಹಿಂದುತ್ವದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವ ಬಿಜೆಪಿ, ಮತ ಕಳವಿಗೆ ಕೈ ಹಾಕಿದೆ. ಮುಸ್ಲಿಮರ ಹೆಸರನ್ನು ಮತ ಪಟ್ಟಿಯಿಂದ ಡಿಲಿಟ್ ಮಾಡಿಸುತ್ತಿದೆ. ಆದ್ದರಿಂದ ಪ್ರತಿ ಮನೆ, ಮನೆಗೆ ತೆರಳಿ ಎಚ್ಚರಿಕೆಯಿಂದ ಮತಪಟ್ಟಿ ಗಮನಿಸಿ ಸರಿ ಪಡಿಸಬೇಕು. ಪ್ರತಿ ಬೂತ್‌ಗೆ ಒಂದಾಗಿ ಹೋಗುವಂತೆ ಮುಖಂಡರಿಗೆ ಶಿವಕುಮಾರ್ ಒಗ್ಗಟ್ಟಿನ ಮಂತ್ರ ಬೋಧಿಸಿದರು.
ದೇಶವನ್ನು ಒಗ್ಗೂಡಿಸುವುದು, ಅಂಬೇಡ್ಕರ್ ಅವರು ದೇಶಕ್ಕೆ ಕೊಡುಗೆಯಾಗಿ ನೀಡಿರುವ ಸಂವಿಧಾನವನ್ನು ಉಳಿಸುವುದು ಸೇರಿ ಐದು ವಿಚಾರಗಳನ್ನು ಮುಂದಿಟ್ಟುಕೊಂಡು ರಾಹುಲ್‌ಗಾಂಧಿ ಭಾರತ್ ಜೋಡೋ ಪಾದಯಾತ್ರೆ ಕೈಗೊಂಡಿದ್ದಾರೆ. ಎಲ್ಲ ಜಾತಿ,ಧರ್ಮದವರು ಸಮಾನವಾಗಿ ಬದುಕುವ ಹಕ್ಕನ್ನು ಸಂವಿಧಾನ ಕೊಟ್ಟಿದೆ ಎಂದರು.
ಹಿಂದು-ಮುಸ್ಲಿಂ, ದಲಿತರು ಸೇರಿ ಎಲ್ಲ ವರ್ಗದವರೂ ಒಂದು ಎಂದು ಕಾಂಗ್ರೆಸ್ಸಿನ ಸಿದ್ಧಾಂತವಾಗಿದೆ. ಬಿಜೆಪಿ ಹಿಂದು ಎನ್ನುತ್ತಿದೆ. ಎಲ್ಲರ ಮೈಯಲ್ಲಿ ಹರಿಯುವ ರಕ್ತ ಕೆಂಪಲ್ಲದೆ ಬೇರೆ ಬಣ್ಣದಲ್ಲಿ ಇದೇಯಾ? ಬಿಜೆಪಿಗೆ ಹಿಂದುತ್ವವೊಂದೇ ಅಜೆಂಡಾವಾಗಿದ್ದು, ಇದೇ ನಮಗೆ ಕೋಮುವಾದಿಗಳ ನಡುವಿರುವ ವ್ಯತ್ಯಾಸ ಎಂದು ಹೇಳಿದರು.
ಇಂದಿರಾಗಾಂಧಿ, ರಾಜೀವ್‌ಗಾಂಧಿ ಅವರು ದೇಶಕ್ಕೆ ಕೊಟ್ಟಿರುವ ಕೊಡುಗೆ ಹಾಗೂ ಪ್ರಧಾನಿ ಹುದ್ದೆ ಬೇಡ ಎಂದ ಸೋನಿಯಾಗಾಂಧಿ ಅವರ ತ್ಯಾಗ ಸ್ಮರಿಸಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರವಧಿ ಜಾರಿಗೊಳಿಸಿದ ಕಲ್ಯಾಣ ಕಾರ‌್ಯಕ್ರಮಗಳನ್ನು ನೆನಪಿಸಿದರು. ನಿಮಗೆ ಈ ತ್ಯಾಗ ಗೊತ್ತಿದ್ದಿಯಾ? ಕಲ್ಯಾಣ ಯೋಜನೆಗಳನ್ನು ಎಂದಾದರೂ ಜಾರಿಗೆ ತಂದಿದ್ದೀರಾ ಎಂದು ಬಿಜೆಪಿ ನಾಯಕರನ್ನು ಪ್ರಶ್ನಿಸಿದರು.
ನಿಮಗೆ ಗೊತ್ತಿರುವುದು ಶೇ.40 ಕಮಿಷನ್ ಒಂದೇ ಎಂದು ರಾಜ್ಯದ ಬಿಜೆಪಿ ಸರ್ಕಾರವನ್ನು ಮೂದಲಿಸಿದರು. ಟಿಕೆಟ್ ಯಾರಿಗೆ ಸಿಗಲಿ, ಎಲ್ಲರೂ ಒಂದಾಗಿ ಚುನಾವಣೆ ಎದುರಿಸಬೇಕು. ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಆರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲುವುದು ನಿಶ್ಚಿತವೆಂದು ಭವಿಷ್ಯ ನುಡಿದರು.
ಮಾಜಿ ಸಚಿವರಾದ ಎಚ್.ಆಂಜನೇಯ, ಡಿ.ಸುಧಾಕರ್, ಮಾಜಿ ಸಂಸದರಾದ ಬಿ.ಎನ್.ಚಂದ್ರಪ್ಪ, ಎಚ್.ಹನುಮಂತಪ್ಪ, ಕೆಪಿಸಿಸಿ ಎಸ್‌ಸಿ ವಿಭಾಗದ ಅಧ್ಯಕ್ಷ ಧರ್ಮಸೇನ, ಅಸಂಘಟಿತ ಕಾರ್ಮಿಕ ವಿಭಾಗದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಶಾಸಕ ಟಿ.ರಘುಮೂರ್ತಿ, ಮಾಜಿ ಶಾಸಕರಾದ ಎ.ಉಮಾಪತಿ, ಎಸ್.ತಿಪ್ಪೇಸ್ವಾಮಿ, ಬಿ.ಜಿ.ಗೋವಿಂದಪ್ಪ, ರಘು ಆಚಾರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಕಾರ್ಯಾಧ್ಯಕ್ಷ ಹಾಲಸ್ವಾಮಿ, ಮುಖಂಡರಾದ ಹನುಮಲಿ ಷಣ್ಮುಖಪ್ಪ, ಬಿ.ಸೋಮಶೇಖರ್, ಜಿ.ಎಸ್.ಮಂಜುನಾಥ್, ಕೆ.ಪಿ.ಸಂಪತ್‌ಕುಮಾರ್, ಡಾ.ಯೋಗೇಶ್‌ಬಾಬು, ಡಿ.ಎನ್.ಮೈಲಾರಪ್ಪ, ಬಿ.ಟಿ.ಜಗದೀಶ್, ಆರ್.ಕೆ.ಸರ್ದಾರ್, ಗೀತಾ ನಂದಿನಿಗೌಡ, ಎಲ್.ತಿಪ್ಪೇಸ್ವಾಮಿ, ಎನ್.ಡಿ.ಕುಮಾರ್, ಜಯಣ್ಣ, ಫಾತ್ಯರಾಜನ್, ಸಿ.ಶಿವುಯಾದವ್, ಮರುಳಾರಾಧ್ಯ, ರಘು, ಕುಮಾರ್, ಎಚ್.ಅಂಜಿನಪ್ಪ, ದಾವಣಗೆರೆಯ ಡಿ.ಬಸವರಾಜ್ ಮತ್ತಿತರರು ಇದ್ದರು.
*ಸಂವಿಧಾನ ಮುಗಿಸಲು ಬಿಜೆಪಿ ಯತ್ನ
ಸಂವಿಧಾನವನ್ನು ಮುಗಿಸಲು ಬಿಜೆಪಿ ಹೊರಟಿದೆ ಎಂದು ಎಐಸಿಸಿ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ರಾಜೇಶ್ ಲಿಲೋಥಿಯಾ ಕಳವಳ ವ್ಯಕ್ತಪಡಿಸಿದರು. ಇದರ ವಿರುದ್ಧ ಜನರನ್ನು ಜಾಗೃತಿಗೊಳಿಸಿ, ಸಂವಿಧಾನವನ್ನು ರಕ್ಷಿಸಲು ರಾಹುಲ್‌ಗಾಂಧಿ ಪಾದಯಾತ್ರೆ ಕೈಗೊಂಡಿದ್ದಾರೆ. ಅಂಬೇಡ್ಕರ್ ನಮಗೆ ದೇವರಿದ್ದಂತೆ. ಸಂವಿಧಾನವೇ ನಮ್ಮ ಧರ್ಮವಾಗಿದೆ ಎಂದರು. ಬಿಜೆಪಿ ಅಪಪ್ರಚಾರಗಳಿಗೆ ಹೆದರುವುದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತರುತ್ತೇವೆ, ಕಾಂಗ್ರೆಸ್ ಮುಕ್ತ ದೇಶ ಮಾಡುವುದಾಗಿ ಹೇಳುತ್ತಿರುವ, ಹಿಂದುತ್ವದ ಹೆಸರಿನಲ್ಲಿ ಜಾತಿ, ಧರ್ಮಗಳ ನಡುವೆ ಸಂಘರ್ಷ ಉಂಟು ಮಾಡುತ್ತಿರುವ ಬಿಜೆಪಿಗೆ ತಕ್ಕ ಉತ್ತರ ನೀಡಬೇಕು ಎಂದು ಕರೆ ನೀಡಿದರು.
*ಕೋಟ್
ಸಂವಿಧಾನವೇ ನಮಗೆ ದೊಡ್ಡ ಗ್ರಂಥ, ಇದನ್ನು ಬದಲಿಸಲು ಬಿಜೆಪಿ ಷಡ್ಯಂತ್ರ ನಡೆಸಿದೆ. ಇದರ ವಿರುದ್ಧ ನಾವು ಹೋರಾಟ ನಡೆಸುತ್ತೇ ವೆ. ಶಾಂತಿ, ನೆಮ್ಮದಿ, ಸಹಬಾಳ್ವೆ ನಮ್ಮ ಗುರಿ. ಅಧಿಕಾರದ ಆಸೆಗಾಗಿ ಪಾದಯಾತ್ರೆ ಮಾಡುತ್ತಿಲ್ಲ. ಜನಸಂಕಲ್ಪಯಾತ್ರೆ ಬದಲು ಬಿಜೆಪಿ ಕ್ಷಮೆ ಯಾತ್ರೆ ಮಾಡಲಿ.
ಸಲೀಂ ಅಹಮ್ಮದ್
ಕಾರ್ಯಾಧ್ಯಕ್ಷ, ಕೆಪಿಸಿಸಿ