ನರಗುಂದದಲ್ಲಿ ಗುಂಡಿಯಲ್ಲಿ ಬಿದ್ದ ದಂಪತಿ ಪಾರು

GUNDI
Published on

ನರಗುಂದ: ಹಗೇದಕಟ್ಟೆ ಬಡಾವಣೆಯ ಮನೆಯೊಂದರಲ್ಲಿ ಶನಿವಾರ ಬೆಳಗ್ಗೆ ಏಕಾಏಕಿ ಭೂಕುಸಿತ ಉಂಟಾಗಿ ಗುಂಡಿಯೊಳಗೆ ಸಿಲುಕಿಕೊಂಡಿದ್ದ ದಂಪತಿಯನ್ನು ಕುಟುಂಬಸ್ಥರು ರಕ್ಷಿಸಿದ್ದಾರೆ. ಶರಣಪ್ಪ ತಿಪ್ಪಣ್ಣ ಕಟ್ಟೇಕಾರ ಹಾಗೂ ಪತ್ನಿ ರುದ್ರವ್ವ ಕಟ್ಟೇಕಾರ ಬದುಕುಳಿದವರು.

ಸುಮಾರು 7 ಗಂಟೆಯಲ್ಲಿ ಕೋಣೆಯಿಂದ ಎದ್ದು ಪಡಸಾಲೆಯತ್ತ ಆಗಮಿಸುವಷ್ಟರಲ್ಲಿ ಭೂಕುಸಿತ ಸಂಭವಿಸಿದೆ. ಇದರಿಂದ ಉಂಟಾದ ಬೃಹದಾಕಾರದ ಗುಂಡಿಯೊಳಗೆ ದಂಪತಿ ಬಿದ್ದಿದ್ದಾರೆ. ಇಬ್ಬರಿಗೂ ಉಸಿರುಗಟ್ಟಿದಂತಾಗಿ ರಕ್ಷಣೆಗೆ ಕೂಗಿಕೊಂಡಿದ್ದಾರೆ. ಕುಟುಂಬಸ್ಥರು ಹಗ್ಗದ ಸಹಾಯದಿಂದ ಮೇಲಕ್ಕೆತ್ತಿದ್ದಾರೆ.

ಇದೇ ವೇಳೆ ಶರಣಪ್ಪರ ಅಣ್ಣನ ಮಗ ಕೂಡ ಆಯತಪ್ಪಿ ಗುಂಡಿಯೊಳಗೆ ಬಿದ್ದು ಗಾಯಗೊಂಡಿದ್ದಾನೆ. ಸ್ಥಳಕ್ಕೆ ಸಚಿವ ಸಿ.ಸಿ. ಪಾಟೀಲ ಭೇಟಿ ನೀಡಿ ಪರಿಶೀಲಿಸಿದರು. ನರಗುಂದದ ವಿವಿಧ ಬಡಾವಣೆಯಲ್ಲಿ 2008ರಿಂದ ಭೂಕುಸಿತ ಘಟನೆ ಉಂಟಾಗುತ್ತಿವೆ. ಕಳೆದ ಆಗಸ್ಟ್​ನಿಂದ ಭೂಕುಸಿತ ಹೆಚ್ಚಾಗುತ್ತಿದ್ದು, ನಿಖರ ಕಾರಣ ಪತ್ತೆ ಹಚ್ಚಲು ಭೂಗರ್ಭ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net