ವಾಸದ ಜಾಗ, ಮನೆ ಉಳಿಸಿಕೊಡಿ

UPPARA HATTI PROTEST (2)-01
Published on

ಚಿತ್ರದುರ್ಗ: ನಾಯಕನಹಟ್ಟಿ ಹೋಬಳಿಯ ಎನ್.ಉಪ್ಪಾರಹಟ್ಟಿ ಗ್ರಾಮದಲ್ಲಿ ಬಡ ಜನರ ಮನೆಗಳನ್ನು ಕೆಡವಲು ಕೆಲವರು ಯತ್ನಿಸುತ್ತಿದ್ದು, ತಕ್ಷಣ ಜಿಲ್ಲಾಡಳಿತ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಗ್ರಾಮದಲ್ಲಿ 50 ಕುಟುಂಬಗಳ ಪೈಕಿ 500ಕ್ಕೂ ಹೆಚ್ಚು ಜನ 70 ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದೇವೆ. ಹಳೆಯ ರಿ.ಸ.ನಂ. 9ರಲ್ಲಿ 1955ಕ್ಕಿಂತ ಮುಂಚಿನಿಂದಲೂ ಮನೆ ನಿರ್ಮಿಸಿಕೊಂಡು ಜೀವಿಸುತ್ತಿದ್ದೇವೆ. ಆದರೆ, ಕೆಲವರು ಅನಗತ್ಯ ಗೊಂದಲ ಸೃಷ್ಟಿಸಿ ಒಕ್ಕಲೆಬ್ಬಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ದೂರಿದರು.

ಗ್ರಾಮ ಪಂಚಾಯಿತಿ ಈಗಾಗಲೇ ವಾಸಿಸುವವರಿಗೆ ಖಾತೆ ಮಾಡಿಕೊಟ್ಟಿದ್ದು, ಶಿಥಿಲಗೊಂಡ ಮನೆಗಳನ್ನು ಆಶ್ರಯ ಮತ್ತು ಅಂಬೇಡ್ಕರ್ ಯೋಜನೆಯಡಿ ನಿರ್ಮಿಸಿಕೊಂಡಿದ್ದೇವೆ. ಪ್ರತಿ ವರ್ಷ ಪಂಚಾಯಿತಿಗೆ ಕಂದಾಯ ಹಾಗೂ ವಿದ್ಯುತ್ ಬಿಲ್ ಕೂಡ ಪಾವತಿಸುತ್ತಿದ್ದೇವೆ. ಹೀಗಿರುವಾಗ ಉಳ್ಳವರು ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.

ಈಚೆಗೆ ಗುಂಪೊಂದು ಗ್ರಾಮಕ್ಕೆ ದಿಢೀರ್ ಬಂದು, ಜಾಗ ಖಾಲಿ ಮಾಡಬೇಕು, ಇಲ್ಲದಿದ್ದರೆ, ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸುತ್ತೇವೆ ಎಂದು ಬೆದರಿಸಿದೆ. ಆದ್ದರಿಂದ ಗ್ರಾಮಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ಸಮಸ್ಯೆ ಆಲಿಸುವ ಮೂಲಕ ಇತ್ಯರ್ಥ ಪಡಿಸಬೇಕು ಎಂದು ಮನವಿ ಮಾಡಿದರು.

ಉಪ್ಪಾರ ಸಂಘದ ಜಿಲ್ಲಾಧ್ಯಕ್ಷ ಎನ್.ವೀರೇಶ್, ಮಾಜಿ ಅಧ್ಯಕ್ಷ ಆರ್.ಮೂರ್ತಿ, ಮುಖಂಡರಾದ ನಾಗರಾಜ್, ಮಹೇಶ್, ಅಜಯ್, ಎಚ್.ತಿಮ್ಮಣ್ಣ, ಅಜ್ಜಪ್ಪ, ಕಾಂತ್‌ರಾಜ್, ರವಿ ಚಳ್ಳಕೆರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net