

ಕೊಪ್ಪಳ: ತಾಲೂಕಿನ ಬಸಾಪುರ ಕೆರೆಯನ್ನು ಎಂಎಸ್‌ಪಿಎಲ್ ಕಂಪನಿ ಅತಿಕ್ರಮಣ ಮಾಡಿಕೊಂಡಿದೆ. ನ್ಯಾಯಾಲಯದ ಆದೇಶವಿದ್ದರೂ ಮೂಲ ಸ್ವರೂಪ ಹಾಳು ಮಾಡಲಾಗಿದೆ.
ಕ್ಷಣ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಹೋರಾಟಗಾರ ಡಿ.ಎಚ್.ಪೂಜಾರ ಒತ್ತಾಯಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಕಾರ್ಖಾನೆಗೆ ಭೂಮಿ ನೀಡುವಾಗ ಸರ್ಕಾರಿ ಕೆರೆ ಬಿಟ್ಟುಕೊಟ್ಟಿದ್ದರು. ನಾವು ಹೋರಾಟ ಮಾಡಿದಾಗ ನ್ಯಾಯಾಲಯ ಸಾರ್ವಜನಿಕರು ಹಾಗೂ ಜಾನುವಾರು ಬಳಕೆಗೆ ಕೆರೆ ಬಳಸಿಕೊಳ್ಳುವಂತೆ ಆದೇಶಿಸಿದೆ.
ಕೆರೆಯ ಮೂಲ ಸ್ವರೂಪ ಹಾಳು ಮಾಡದಂತೆ ಕಂಪನಿಗೆ ನಿರ್ದೇಶಿಸಿದೆ. ಆದರೆ, ಕೆರೆ ಹಾಳು ಮಾಡಲಾಗಿದೆ. ಇದೀಗ ಅದರ ಸುತ್ತ ಕಾಂಪೌಂಡ್ ನಿರ್ಮಿಸುತ್ತಿದ್ದು, ಜನರ ಬಳಕೆಗೆ ನೀಡುತ್ತಿಲ್ಲ.
ಕ್ರಮ ಕೈಗೊಳ್ಳಬೇಕಾದ ಜಿಲ್ಲಾಡಳಿತ ಜನಪ್ರತಿನಿಧಿಗಳ ದಿಕ್ಕು ತಪ್ಪಿಸುತ್ತಿದೆ. ಹೋರಾಟ ಮಾಡಲು ಮುಂದಾದಾಗ ಪೊಲೀಸರು ಮಧ್ಯ ಪ್ರವೇಶಿಸಿ ಕಾಲವಕಾಶ ಕೇಳಿದ್ದರು.
ಆದರೆ, ರಾತ್ರೋ ರಾತ್ರಿ ಕಾಂಪೌಂಡ್ ನಿರ್ಮಿಸುತ್ತಿದ್ದಾರೆಂದು ಆರೋಪಿಸಿದರು. ತಕ್ಷಣ ಜಿಲ್ಲಾಧಿಕಾರಿಗಳು ನ್ಯಾಯಾಲಯ ಆದೇಶ ಉಲ್ಲಂಘಿಸಿದ ಕಂಪನಿಗೆ ನೋಟಿಸ್ ನೀಡಿ ಕಾನೂನು ಕ್ರಮ ಕೈಗೊಳ್ಳಬೇಕು.
ಜನ ಪ್ರತಿನಿಧಿಗಳು ಜನರ ಹಿತರಕ್ಷಣೆ ಕಾಪಾಡಬೇಕು. ಸಾರ್ವಜನಿಕರೂ ಹೋರಾಟದಲ್ಲಿ ಭಾಗಿಯಾಗಬೇಕು. ಜಿಲ್ಲಾಡಳಿತ ಹಾಗೂ ಕಾರ್ಖಾನೆ ನಡೆ ಪ್ರಶ್ನಿಸಿ ಹೈ ಕೋರ್ಟ್‌ನಲ್ಲಿ ಮತ್ತೊಮ್ಮೆ ಕಾನೂನು ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ಸಾಹಿತಿ ಅಲ್ಲಮ ಪ್ರಭು ಬೆಟ್ಟದೂರು, ಹೋರಾಟಗಾರರ ಕೆ.ಬಿ.ಗೋನಾಳ, ಬಸವರಾಜ ಶೀಲವಂತರ, ಗ್ರಾಮಸ್ಥ ಮೂಕಪ್ಪ ಮೇಸ್ತ್ರಿ ಇದ್ದರು.