ಹಾವೇರಿ ವಿವಿ ಮುಚ್ಚಬೇಡಿ, ಸಶಕ್ತಗೊಳಿಸಿ; ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ

20 HVR 6 B
Published on

ಹಾವೇರಿ: ರಾಜ್ಯ ಸರ್ಕಾರ ನೂತನ ವಿವಿಗಳನ್ನು ಮುಚ್ಚಲು ಮುಂದಾಗಿರುವುದನ್ನು ಖಂಡಿಸಿ ಹಾವೇರಿ ವಿಶ್ವವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿಶ್ವವಿದ್ಯಾಲಯದ ಅಧೀನದ ವಿವಿಧ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು, ವಿವಿಧ ವಿದ್ಯಾರ್ಥಿ ಸಂಘಟನೆಗಳು ಹಾಗೂ ಸಾಹಿತಿಗಳು ಹಾಗೂ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಗುರುವಾರ ಬೃಹತ್ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಲಾಯಿತು.

ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಅಧ್ಯಕ್ಷ ಲಿಂಗಯ್ಯ ಹಿರೇಮಠ ಮಾತನಾಡಿ, ವಿಶ್ವವಿದ್ಯಾಲಯ ಎಂದರೆ ಭವಿಷ್ಯತ್ತಿನ ನಾಯಕರನ್ನು ರೂಪಿಸುವ ಜ್ಞಾನ ಕೇಂದ್ರಗಳು. ವಿದ್ಯಾರ್ಜನೆಯ ಕೇಂದ್ರಗಳಾದ ವಿವಿಯಿಂದ ಹೊರಡುವ ವಿದ್ಯಾರ್ಥಿಗಳು ದೇಶದ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸುವ ವ್ಯಕ್ತಿಗಳಾಗುತ್ತಾರೆ. ಅಂತಹ ವಿವಿಗಳಿಗೆ ಮೂಲ ಸೌಲಭ್ಯಗಳನ್ನು ನೀಡುವುದು ಸರ್ಕಾರಗಳ ಆದ್ಯ ಕರ್ತವ್ಯ ಮತ್ತು ಹೊಣೆಗಾರಿಕೆ. ಆದರೆ ರಾಜ್ಯದಲ್ಲಿ ಹಿಂದಿನ ಸರ್ಕಾರ ಘೋಷಣೆ ಮಾಡಿದ್ದ ಹೊಸ ವಿವಿಗಳನ್ನು ಇಂದಿನ ರಾಜ್ಯ ಸರ್ಕಾರ ಮುಚ್ಚಲು ಹೊರಟಿರುವುದು ಖಂಡನೀಯ. ತನ್ನ ಪ್ರಚಾರದ ಗ್ಯಾರಂಟಿಗಳಿಗಾಗಿ ಹೊಸ ವಿವಿಗಳನ್ನು ಬಲಿಕೊಡಲು ಮುಂದಾಗಿರುವುದು ಅಕ್ಷಮ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಾವೇರಿ ವಿವಿ ಅತಿಥಿ ಉಪನ್ಯಾಸಕ ಡಾ.ಸಂತೋಷ ಅಲದಕಟ್ಟಿ ಮಾತನಾಡಿ, ಹಾವೇರಿ ವಿವಿಯನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು. ಹಾವೇರಿ ವಿವಿ ಅಧೀನದಲ್ಲಿ 42 ಕಾಲೇಜ್‌ಗಳು ಕಾರ್ಯನಿರ್ವಹಿಸುತ್ತಿವೆ. 18,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಿವಿ ಉಳಿಸುವಂತೆ ವಿಧಾನಸಭೆ ಉಪಸಭಾಧ್ಯಕ್ಷ ಹಾಗೂ ಸ್ಥಳೀಯ ಶಾಸಕ ರುದ್ರಪ್ಪ ಲಮಾಣಿ ಹಾಗೂ ಬ್ಯಾಡಗಿ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ ಶಿವಣ್ಣನವರಿಗೆ ಭೇಟಿಯಾಗಿ ಮನವಿ ಸಲ್ಲಿಸಿದವು. ಆದರೆ ಶಾಸಕರಿಗೆ ಈ ಬಗ್ಗೆ ಚರ್ಚೆ ನಡೆಯುತ್ತಿದೆ ಎಂಬ ಮಾಹಿತಿಯೇ ಗೊತ್ತಿಲ್ಲ. ಜಿಲ್ಲೆಯ ಆರು ಶಾಸಕರು ಒಗ್ಗಟ್ಟಾಗಿ ಹಾವೇರಿ ವಿವಿಯನ್ನು ಉಳಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಎಬಿವಿಪಿ ನಗರ ಕಾರ್ಯದರ್ಶಿ ನಾಗರಾಜ ಪುರವಂತಿಗೌಡರ, ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ದುರಗಪ್ಪ ಎಮ್ಮಿಯವರ, ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ, ಬಸವರಾಜ ಪೂಜಾರ, ಹಿರಿಯ ಸಾಹಿತಿ ಸತೀಶ ಕುಲಕರ್ಣಿ, ಕಿರಣ ಕೋಣನವರ, ಪರಿಮಳ ಜೈನ್, ರೇಣುಕಾ ಗುಡಿಮನಿ, ಅನಿತಾ ಮಂಜುನಾಥ, ರಾಜೇಂದ್ರ ಹೆಗ್ಡೆ, ಹಾವೇರಿ ವಿವಿ, ಹಾವೇರಿ ನಗರ, ಮೋಟೆಬೆನ್ನೂರ, ಮತ್ತಿತರ ಕಾಲೇಜ್‌ಗಳ ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net