ಮುಂದಿನ ಪೀಳಿಗೆಗೂ ಗುಬ್ಬಿ ಸಂತತಿ ಉಳಿಸಿ: ಪರಿಸರವಾದಿ ಎಂ.ಕೆ. ಸಪ್ತ ಗಿರೀಶ್ ಕೋರಿಕೆ

33
Published on

ಮೈಸೂರು: ಇತ್ತೀಚಿನ ದಿನಗಳಲ್ಲಿ ಅಳಿವಿನಂಚಿನಲ್ಲಿರುವ ಗುಬ್ಬಚ್ಚಿ ಉಳಿದರೆ ಉತ್ತಮ ಪರಿಸರ ನೋಡಲು ಸಾಧ್ಯ. ನಾವು ಗುಬ್ಬಚ್ಚಿಗಳೊಂದಿಗೆ ಬೆಳೆದವರು, ಪರಿಸರ ಸಮತೋಲನ ಬಹಳ ಮುಖ್ಯ. ಗುಬ್ಬಚ್ಚಿ ಮಾತ್ರವಲ್ಲ ಎಲ್ಲ ಪಕ್ಷಿಗಳು ಕೂಡ ಅಳಿವಿನಂಚಿನಲ್ಲಿದೆ. ಆದ್ದರಿಂದ ಮುಂದಿನ ಪೀಳಿಗೆಗೂ ಗುಬ್ಬಿ ಸಂತತಿ ಉಳಿಸಿ ಎಂದು ಪಕ್ಷಿ ತಜ್ಞ ಹಾಗೂ ಪರಿಸರವಾದಿ ಎಂ.ಕೆ. ಸಪ್ತ ಗಿರೀಶ್ ಸಲಹೆ ನೀಡಿದರು.
ವಿಶ್ವ ಗುಬ್ಬಚ್ಚಿ ದಿನಾಚರಣೆ ಅಂಗವಾಗಿ ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ (ಗುಬ್ಬಚ್ಚಿ ಶಾಲೆ) ಆವರಣದಲ್ಲಿ ಕೆಎಂಪಿಕೆ ಟ್ರಸ್ಟ್‌ನಿಂದ ಇತ್ತೀಚೆಗೆ ಆಚರಿಸಲಾದ ಗುಬ್ಬಚ್ಚಿ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಕ್ಷಿಗಳಿಗೆ ಪೋಷಣೆಯ ಕಾಳಜಿಯೊಂದಿಗೆ ಪ್ರತಿ ಮಕ್ಕಳು ತಮ್ಮ ಮನೆಯಲ್ಲಿ ನೀರಿನ ಬಟ್ಟಲು ಇಡಬೇಕು. ಇಂದು ಕೃಷಿಗೆ ಕ್ರಿಮಿನಾಶಕಗಳನ್ನು ಬಳಸಲಾಗುತ್ತಿದೆ. ಇದು ವಿಷಕಾರಿಯಾಗಿದ್ದು, ಗುಬ್ಬಿಗಳು ಸಾವಿಗೀಡಾಗುತ್ತಿವೆ. ಗುಬ್ಬಚ್ಚಿ ಉಳಿಸಿದರೆ ಪರಿಸರದ ಉಳಿವು. ಮನುಷ್ಯರು ನಾವು ಮಾತ್ರ ಬದುಕದೆ, ಎಲ್ಲ ಜೀವಿಗಳು ಬದುಕಲು ಅವಕಾಶ ಮಾಡಿಕೊಡಬೇಕೆಂದು ಹೇಳಿದರು.
ಸುಮಾರು 25ಕ್ಕೂ ಅಧಿಕ ಗುಬ್ಬಿಗಳ ಪ್ರಭೇದಗಳಿವೆ. ಆದರೆ ಗುಬ್ಬಿ ಸಂತತಿ ಇಂದು ಅಳಿವಿನಂಚಿನಲ್ಲಿದೆ. ಮನುಷ್ಯನಿಂದ ಗುಬ್ಬಿಗೆ ಕಂಟಕ ಎದುರಾಗಿದೆ. ವಾಸಿಸಲು ಪೂರಕ ವಾತಾವರಣ ಇಲ್ಲದಿರುವುದು ಗುಬ್ಬಿ ಸಂತತಿ ಇಳಿಮುಖವಾಗಲು ಪ್ರಮುಖ ಕಾರಣ. ಗುಬ್ಬಿಯ ಸಂಕುಲವನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು.
ಹಿರಿಯ ಸಮಾಜ ಸೇವಕ ಕೆ. ರಘುರಾಮ್ ವಾಜಪೇಯಿ ಮಾತನಾಡಿ, ಗುಬ್ಬಿ ಕಾಣಲು ಸಿಗುತ್ತಿಲ್ಲ. ಆದರೆ ನಮ್ಮ ಬಾಲ್ಯವನ್ನು ನೆನಪಿಸಿಕೊಂಡರೆ ಗುಬ್ಬಚ್ಚಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದವು. ಆದರೆ ಇಂದು ಗುಬ್ಬಚ್ಚಿ ಸೇರಿದಂತೆ ಹಲವು ಪಕ್ಷಿ ಸಂಕುಲ ಅವಸಾನದಂಚಿನಲ್ಲಿದೆ ಎಂದರು.
ವಿಶೇಷವಾಗಿ ಮಕ್ಕಳಿಗೆ ವಿವಿಧ ಪಕ್ಷಿಗಳ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರಕೃತಿ ಸಮತೋಲನಕ್ಕಾಗಿ ಗುಬ್ಬಚ್ಚಿಗಳನ್ನು ಉಳಿಸೋಣ.ಬೇಸಿಗೆಯ ಬಿಸಿಲಿನ ತಾಪದಿಂದ ಪ್ರಾಣಿ, ಪಕ್ಷಿಗಳನ್ನು ರಕ್ಷಿಸೋಣ. ಅಳಿದು ಹೋಗುತ್ತಿರುವ ಗುಬ್ಬಚ್ಚಿ ಸಂಕುಲಗಳ ಉಳಿವಿಗಾಗಿ ಜನಜಾಗೃತಿ ಮೂಡಿಸೋಣ. ನಶಿಸಿ ಹೋಗುತ್ತಿರುವ ಗುಬ್ಬಚ್ಚಿ ಸಂಕುಲವನ್ನು ಸಂರಕ್ಷಿಸೋಣ ಎಂಬ ಘೋಷವಾಕ್ಯ ನಾಮಫಲಕದ ಮೂಲಕ ಪಕ್ಷಿಗಳ ಸಂರಕ್ಷಣೆಯ ಸಂದೇಶ ಸಾರಿದರು.
ಪಕ್ಷಿಗಳಿಗೆ ನೀರಿನ ಬೌಲು ಅಳವಡಿಸಿ ನೀರನ್ನು ಹಾಕುವ ಮೂಲಕ ಚಾಲನೆ ನೀಡಲಾಯಿತು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಆರ್.ಎಚ್.ಪವಿತ್ರಾ, ಪರಿಸರ ಪ್ರೇಮಿ ಶ್ರೀನಿವಾಸ್ ಭಾಷ್ಯಂ, ಜೀವಧಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಅರಿವು ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ್ ಕಶ್ಯಪ್ ಶಾಲೆಯ ಮುಖ್ಯಶಿಕ್ಷಕ ಮೋಹನ್ ಕುಮಾರ್, ಮುಖಂಡರಾದ ಅಜಯ್ ಶಾಸ್ತ್ರಿ, ಬೈರತಿಯ ಲಿಂಗರಾಜು, ದಿವ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net