

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಇತ್ತೀಚೆಗೆ ಶಿಕ್ಷಣ ಎಂಬುದು ಒಂದು ವ್ಯಾಪಾರ ಸಂಸ್ಥೆಯಾಗಿ ಬೆಳೆಯುತ್ತಿರುವುದು ಉತ್ತಮ ಬೆಳವಣಿಗೆಯಲ್ಲ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶ ಎಂ.ಎಲ್.ರಘುನಾಥ್ ಕಳವಳ ವ್ಯಕ್ತಪಡಿಸಿದರು.
ನಗರದ ಶ್ರೀ ಗೋಪಿ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಗ್ರಾಮಾಂತರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ವಕೀಲ ಸಂಘ, ವಿವಿಧ ಇಲಾಖೆಗಳ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಕನ್ನಡ ಸರ್ಕಾರಿ ಶಾಲೆ ಉಳಿಸಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೊದಲು ಶಿಕ್ಷಣ ಮೂಲಭೂತ ಹಕ್ಕಾಗಿರಲಿಲ್ಲ. ಆದರೆ ಮಕ್ಕಳಿಗೆ ಆಸ್ತಿ ಮಾಡುವ ಬದಲು, ಮಕ್ಕಳನೇ ಆಸ್ತಿಯಾಗಿ ಮಾಡಬೇಕು ಎಂಬ ಉದ್ದೇಶದಿಂದ ಸಂವಿಧಾನದಲ್ಲಿ ಆಸ್ತಿಯ ಹಕ್ಕನ್ನು ತಿದ್ದುಪಡಿ ಮಾಡಿ ಕಡ್ಡಾಯ ಶಿಕ್ಷಣದ ಹಕ್ಕನ್ನು ಜಾರಿಗೊಳಿಸಲಾಗಿದೆ ಎಂದರು.
ಸರ್ಕಾರಿ ಶಾಲೆ ಹಾಗೂ ಖಾಸಗಿ ಸಂಸ್ಥೆಗಳ ಶಿಕ್ಷಣದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಆದರೆ ಕೆಲ ಪಾಲಕರು ಖಾಸಗಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿಸಿದರೆ ಗೌರವ ಹೆಚ್ಚಾಗುತ್ತದೆ ಎಂಬ ತಪ್ಪು ಕಲ್ಪನೆಯಿಂದ ಖಾಸಗಿ ಶಾಲೆ ಕಡೆ ಮುಖ ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಎಲ್ಲ ರೀತಿಯ ಮೂಲ ಸೌಕರ್ಯ ಒದಗಿಸುತ್ತಿದ್ದು, ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಸಂದೀಪ್ ಸಾಲಿಯಾನ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯು ಚಿಕ್ಕಂದಿನಿಂದಲೇ ಕನ್ನಡ ಶಾಲೆ ಉಳಿಸುವ ಕಿಚ್ಚು ಬೆಳೆಸಿಕೊಳ್ಳಬೇಕು ಎಂದರು.
ಕನ್ನಡ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಹಲವರು ದೇಶದಲ್ಲಿ ವಿವಿಧ ಉನ್ನತ ಹುದ್ದೆ ಅಲಂಕರಿಸಿದ್ದಾರೆ ಎಂಬುದನ್ನು ಅರಿತು ಪ್ರತಿಯೊಬ್ಬರೂ ಕನ್ನಡ ಶಾಲೆ ಉಳಿವಿಗೆ ಶ್ರಮಿಸಬೇಕಿದೆ. ಜಿಲ್ಲೆಯಾದ್ಯಂತ 1641 ಕನ್ನಡ ಸರ್ಕಾರಿ ಶಾಲೆಯಲ್ಲಿ ಸ್ವಚ್ಛತೆ, ಬಣ್ಣ ಹಚ್ಚುವುದು, ಗೋಡೆ ಬರಹ, ಶೌಚಗೃಹ ನಿರ್ಮಾಣ, ಕುಡಿಯುವ ನೀರಿನ ಸೌಲಭ್ಯ, ಕಟ್ಟಡ ದುರಸ್ತಿ ಸೇರಿ ವಿವಿಧ ಸೌಲಭ್ಯ ನೀಡುವ ಕಾರ್ಯಕ್ಕೆ ಆದ್ಯತೆ ನೀಡಬೇಕು ಇಲ್ಲವಾದಲ್ಲಿ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
12 ಸಾವಿರ ಕಾರ್ಯಕ್ರಮ: ಕಾನೂನು ಸೇವೆಗಳ ಪ್ರಾಧಿಕಾರದಿಂದ ಏ.24ರಿಂದ ಜೂ.23ರವರೆಗೂ ಜಿಲ್ಲೆಯಾದ್ಯಂತ ಪರಿಸರ, ಕೆರೆ ಸಂರಕ್ಷಣೆ, ಶಿಕ್ಷಣ, ನಿರುದ್ಯೋಗ, ಬಾಲ ಕಾರ್ಮಿಕ ಪದ್ಧತಿ, ಲೈಂಗಿಕ ಕಿರುಕುಳಕ್ಕೆ ತಡೆ ಸೇರಿ 12 ಸಾವಿರಕ್ಕೂ ಹೆಚ್ಚು ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ. ದೇಶದಲ್ಲೇ ಅತಿಹೆಚ್ಚು ಕಾರ್ಯಕ್ರಮ ರೂಪಿಸಿದ ಕೀರ್ತಿ ಗ್ರಾಮಾಂತರ ಜಿಲ್ಲೆಗೆ ಸಲ್ಲುತ್ತದೆ ಎಂದು ನ್ಯಾಯಾಧೀಶ ಸಂದೀಪ್‌ಸಾಲಿಯಾನ ತಿಳಿಸಿದರು.
ವಿವಿಧ ಕಾರ್ಯಕ್ರಮ: ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರವಾಸಿ ಮಂದಿರದಿಂದ ಶ್ರೀ ಗೋಪಿ ವೆಂಕಟೇಶ್ವರ ಕಲ್ಯಾಣ ಮಂಟಪದವರೆಗೂ ಸರ್ಕಾರಿ ಶಾಲೆ ಉಳಿಸುವ ಕುರಿತು ಬೃಹತ್ ಜಾಥಾ ಹಮ್ಮಿಕೊಳ್ಳಲಾಗಿತ್ತು. ತಾಲೂಕಿನ ಸೋಂಪುರ ಸರ್ಕಾರಿ ಶಾಲೆ ಮಕ್ಕಳು ಬೀದಿನಾಟಕ ಅಭಿನಯಿಸಿ ಗಮನ ಸೆಳೆದರು. ವಿವಿಧ ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಜತೆಗೆ ಶಾಲೆಯಿಂದ ಹೊರ ಉಳಿದ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಪಠ್ಯಪುಸ್ತಕ ವಿತರಣೆ ಮಾಡಲಾಯಿತು.
.