

ಲಕ್ಷ್ಮೇಶ್ವರ: ರೈತರ ಜಮೀನು, ಮಠಗಳು, ಸಾರ್ವಜನಿಕ ಆಸ್ತಿಗಳ ಪಹಣಿಯಲ್ಲಿ ನಮೂದಾದ ವಕ್ಫ್ ಹೆಸರು ತೆಗೆದು ಹಾಕುವಂತೆ ತಾಲೂಕು ಭಾರತೀಯ ಕಿಸಾನ್ ಸಂಘದಿಂದ ಮಂಗಳವಾರ ತಹಸೀಲ್ದಾರ್ ವಾಸುದೇವ ಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಯಿತು.
ರೈತರ ಬೆನ್ನೆಲುಬು ಮುರಿಯವ ಕೆಲಸ ಮಾಡುತ್ತಿರುವ ವಕ್ಫ್ ಬೋರ್ಡ್‌ನ ಅವೈಜ್ಞಾನಿಕ, ತುಘಲಕ್ ಆಡಳಿತದ ಪರಮಾವಧಿಗೆ ಸರ್ಕಾರಗಳು ನಿಯಂತ್ರಣ ಹೇರಬೇಕು. ಪೂರ್ವಜರ ಕಾಲದಿಂದಲೂ ಕೃಷಿ ಮಾಡುತ್ತಾ ಬಂದಿರುವ ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ಬೋರ್ಡ್‌ನ ಹೆಸರು ನಮೂದಾಗಿದ್ದು ಯಾವುದೇ ತಪ್ಪು ಮಾಡದ ರೈತರು ಕೋರ್ಟ್‌ಗೆ ಅಲೆಯುವಂತಾಗಿದೆ. ಇದರಿಂದ ರೈತರಿಗೆ ಬೆಳೆವಿಮೆ, ಬೆಳೆಹಾನಿ, ಬೆಳೆಸಾಲ ಸೇರಿ ಯಾವುದೇ ಸರ್ಕಾರದ ಯೋಜನೆಗಳು ಸಿಗದೆ ವಂಚಿತರಾಗಿದ್ದೇವೆ. ವಕ್ಫ್ ಅನ್ಯಾಯದಿಂದ ರೈತರು ಹಾಗೂ ಸಾರ್ವಜನಿಕರು ತತ್ತರಿಸಿ ಹೋಗಿದ್ದು ಆತ್ಮಹತ್ಯೆಯನ್ನೂ ಮಾಡಿಕೊಳ್ಳುತ್ತಿದ್ದಾರೆ. ದಾಖಲೆಯಲ್ಲಿ ನಮೂದಾದ ವಕ್ಫ್ ಬೋರ್ಡ್‌ನ ಹೆಸರು ತೆಗೆದು ಹಾಕಿ ನ್ಯಾಯ ಒದಗಿಸಬೇಕು. ವಕ್ಫ್ ಬೋರ್ಡ್ ಪರಮಾಧಿಕಾರ ರದ್ದುಪಡಿಸಬೇಕು. ಅನ್ಯಾಯ ಮುಂದುವರಿದರೆ ರಾಜ್ಯಾದ್ಯಂತ ರೈತ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಭಾರತೀಯ ಕಿಸಾನ್ ಸಂಘದ ತಾಲೂಕಾಧ್ಯಕ್ಷ ಅಜೇಯ ಕರಿಗೌಡ್ರ, ಉಪಾಧ್ಯಕ್ಷ ಟಾಕಪ್ಪ ಸಾತಪುತೆ, ಗಂಗಾಧರ ಬಂಕಾಪುರ, ಸುರೇಶ ಬಾಘಲದ, ವಸಂತಗೌಡ ಕರೆಗೌಡ್ರ, ಬಸಪ್ಪ ದೊಡ್ಡಗಣ್ಣವರ, ಬಸವರಾಜ ಮೂಲಿಮನಿ, ಎಸ್.ಎಂ. ಪಾಟೀಲ, ಚಂದ್ರಗೌಡ ಕರೆಗೌಡ್ರ, ಮಹೇಶ ಅಂದಲಗಿ, ಸೋಮಪ್ಪ ಮಜ್ಜಿಗುಡ್ಡದ, ಬಸವರಾಜ ಕೋಡಳ್ಳಿ, ಮಾಂತೇಶ ಲಿಂಗಶೆಟ್ಟಿ, ಸೋಮು ಜಬಡಿ, ಸುರೇಶ ಗೋಡಿ, ಇತರರಿದ್ದರು.