ಶಿಕ್ಷಣದೊಂದಿಗೆ ಸಂಸ್ಕೃತಿ, ಪರಿಸರ ಉಳಿಸಿ: ಹರಿಣಿ ವಿಜಯ್

aadivasi dinacharane
Published on

ಮಡಿಕೇರಿ: ಇಂದಿನ ಆಧುನಿಕ ಯುಗದಲ್ಲಿ ಶಿಕ್ಷಣವೊಂದಿದ್ದರೆ ಸಾಕು ಎನ್ನುವ ಮನೋಭಾವ ಬೆಳೆಯುತ್ತಿದೆ. ಇದು ಸರಿಯಲ್ಲ. ಶಿಕ್ಷಣದೊಂದಿಗೆ ನಮ್ಮ ಸಂಸ್ಕೃತಿ ಮತ್ತು ಪರಿಸರವನ್ನು ಉಳಿಸಿ ಬೆಳೆಸಿದರೆ ಮಾತ್ರ ನಮಗೆ ಭವಿಷ್ಯವಿದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮಡಿಕೇರಿ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಈರಮಂಡ ಹರಿಣಿ ವಿಜಯ್ ಅಭಿಪ್ರಾಯಪಟ್ಟರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮಡಿಕೇರಿ ಸ್ಥಳೀಯ ಸಂಸ್ಥೆ ವತಿಯಿಂದ ಪಾಲೇಮಾಡು ಅಂಗನವಾಡಿ ಕೇಂದ್ರದಲ್ಲಿ ನಡೆದ ವಿಶ್ವ ಬುಡಕಟ್ಟು ದಿನಾಚರಣೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರತಿಯೊಬ್ಬರಿಗೆ ಶಿಕ್ಷಣದ ಅಗತ್ಯವಿದೆ. ಆದರೆ ಶಿಕ್ಷಣದ ಜೊತೆ ಜೊತೆಯಲ್ಲಿ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗಾಗಿ ಬೆಳೆಸಿಕೊಂಡು ಹೋಗಬೇಕು ಎಂದ ಅವರು, ಬುಡಕಟ್ಟು ಜನರು ಈ ಪರಿಸರದ ಅವಿಭಾಜ್ಯ ಅಂಗವಾಗಿದ್ದಾರೆ. ಅವರಿದ್ದರೆ ಪರಿಸರ ಉಳಿಯುತ್ತದೆ. ನಾವು ಕೂಡ ಪರಿಸರದ ಬಗ್ಗೆ ಕಾಳಜಿ ವಹಿಸಬೇಕಾಗಿದೆ. ಕೊಡಗಿನ ಗದ್ದೆ ಮತ್ತು ತೋಟಗಳು ಇಂದು ಮರೆಯಾಗುತ್ತಿದ್ದು, ಕಾಂಕ್ರೀಟ್ ಕಟ್ಟಡಗಳು ತಲೆ ಎತ್ತುತ್ತಿವೆ. ಸುತ್ತಮುತ್ತಲ ಹಸಿರ ಪರಿಸರ ಅಭಿವೃದ್ಧಿಯ ಹೆಸರಿನಲ್ಲಿ ನಾಶವಾಗುತ್ತಿದೆ. ಇಂದು ಪರಿಸರ ನಾಶವಾದರೆ ಮುಂದೊಂದು ದಿನ ಮನುಷ್ಯರು ಕೂಡ ನಾಶವಾಗಬೇಕಾಗುತ್ತದೆ ಎಂದು ಎಚ್ಚರಿಕೆಯ ಮಾತುಗಳನ್ನಾಡಿದರು.

ಚೊಟ್ಟೆಪಾರೆ ಹಾಡಿಯ ಬುಡಕಟ್ಟು ಜನಾಂಗದ ಮುಖಂಡ ಜೆ.ಕೆ.ರಾಮು ಮಾತನಾಡಿ, ಇಂದು ಆದಿವಾಸಿಗಳು ಕೂಡ ಉನ್ನತ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಆದರೆ, ಬುಡಕಟ್ಟು ಸಂಪ್ರದಾಯವನ್ನು ಕಡೆಗಣಿಸದೆ ಆಚರಿಸಿಕೊಂಡು ಹೋಗುತ್ತಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಸುಮಾರು ೫೨ ಆದಿವಾಸಿ ಮೂಲ ಸಮುದಾಯಗಳಿವೆ. ಈ ಸಮುದಾಯಗಳನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಯಾವುದೇ ಕಾರಣಕ್ಕೂ ಬುಡಕಟ್ಟು ಜನಾಂಗ ನಶಿಸಿ ಹೋಗಬಾರದು. ಸಾಮಾಜಿಕ ಪಿಡುಗುಗಳ ದುಷ್ಪರಿಣಾಮದ ಕುರಿತು ಆದಿವಾಸಿಗಳಲ್ಲಿ ಹೆಚ್ಚು ಹೆಚ್ಚು ಅರಿವು ಮೂಡಿಸಬೇಕಾಗಿದೆ ಎಂದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಆಯುಕ್ತ ಜಿಮ್ಮಿ ಸಿಕ್ವೆರಾ ಮಾತನಾಡಿ, ಬುಡಕಟ್ಟು ಜನರು ಶಿಕ್ಷಣಕ್ಕೆ ಮಹತ್ವ ನೀಡಬೇಕು. ಉನ್ನತ ಶಿಕ್ಷಣವನ್ನು ಪಡೆಯಬೇಕು ಎಂದು ಕಿವಿಮಾತು ಹೇಳಿದರು.

ಪ್ರತಿಯೊಬ್ಬರು ವಿದ್ಯಾವಂತರಾಗಬೇಕು ಎನ್ನುವ ಕಾರಣಕ್ಕಾಗಿ ಸರ್ಕಾರ ಎಲ್ಲಾ ಸೌಲಭ್ಯಗಳನ್ನು ನೀಡುತ್ತಿದೆ. ಉಚಿತ ಯೋಜನೆಗಳನ್ನು ಜಾರಿ ಮಾಡುತ್ತಿದೆ. ಇವುಗಳನ್ನೆಲ್ಲ ಸದುಪಯೋಗಪಡಿಸಿಕೊಳ್ಳಬೇಕು, ವಿದ್ಯೆಯನ್ನು ೧೦ನೇ ತರಗತಿಗೆ ಮೊಟಕುಗೊಳಿಸಬಾರದು. ಹೆಚ್ಚಿನ ವಿದ್ಯಾಭ್ಯಾಸ ಪಡೆಯುವ ಮೂಲಕ ದಬ್ಬಾಳಿಕೆ ಮತ್ತು ಅಕ್ರಮಗಳನ್ನು ಧೈರ್ಯದಿಂದ ಎದುರಿಸಬೇಕು. ಹಣವೊಂದಿದ್ದರೆ ಸಾಲದು ಶಿಕ್ಷಣ ಅತಿ ಮುಖ್ಯ. ವಿದ್ಯೆಯನ್ನು ಯಾರಿಂದಲೂ ಕದಿಯಲು ಸಾಧ್ಯವಿಲ್ಲ ಎಂದರು.

ಹೊದ್ದೂರು ಗ್ರಾ.ಪಂ ಅಧ್ಯಕ್ಷ ಎಚ್.ಎ.ಹಂಸ ಮಾತನಾಡಿ, ಆದಿವಾಸಿಗಳು ಸ್ವಂತ ಸೂರು ಹೊಂದಬೇಕು ಎನ್ನುವುದು ನಮ್ಮ ಗುರಿಯಾಗಿದೆ. ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ ಮತ್ತು ಹೋರಾಟಗಳಿಗೆ ಸ್ಪಂದಿಸಲಾಗುತ್ತಿದೆ. ಬಡವರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಬದ್ಧರಾಗಿದ್ದೇವೆ ಎಂದು ಭರವಸೆ ನೀಡಿದರು.

ಮೂರ್ನಾಡು ಪೊಲೀಸ್ ಉಪ ಠಾಣೆಯ ಸಹಾಯಕ ಉಪ ನಿರೀಕ್ಷಕ ಪಿ.ಬಿ.ಮೊಣ್ಣಪ್ಪ, ಹೊದ್ದೂರು ಗ್ರಾ.ಪಂ ಸದಸ್ಯರುಗಳಾದ ಕೆ.ಮೊಣ್ಣಪ್ಪ, ಕುಸುಮಾವತಿ ಹಾಗೂ ಹಮೀದ್ ಅವರುಗಳು ಬುಡಕಟ್ಟು ಜನಾಂಗದ ಸಮಸ್ಯೆಗಳು ಮತ್ತು ಪ್ರಗತಿಯ ಕುರಿತು ಮಾತನಾಡಿದರು.

ಬುಡಕಟ್ಟು ಜನಾಂಗದ ಸಾಧಕರಾದ ಲಕ್ಷ್ಮಿ, ಜೆ.ಕೆ.ರಾಮು ಹಾಗೂ ವೈ.ಪಿ.ತಮ್ಮಯ್ಯ ಅವರುಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಚೊಟ್ಟೆಪಾರೆ ಹಾಡಿ ತಂಡದ ವತಿಯಿಂದ ನಡೆದ ಹಾಡು ಮತ್ತು ನೃತ್ಯ ಪ್ರದರ್ಶನ ಗಮನ ಸೆಳೆಯಿತು. ಬುಡಕಟ್ಟು ಜನಾಂಗದ ಹಾಡು ಹಾಡಿದ ಲಕ್ಷ್ಮಿ ಅವರು ನೆರೆದಿದ್ದವರ ಮೆಚ್ಚುಗೆಗೆ ಪಾತ್ರರಾದರು

ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಎ.ಎ.ಅಬ್ದುಲ್ಲ, ಸದಸ್ಯೆ ಲಕ್ಷ್ಮಿ, ಸ್ಕೌಟ್ ಮತ್ತು ಗೈಡ್ ಜಿಲ್ಲಾ ಕಾರ್ಯದರ್ಶಿ ಎಂ.ಎಂ.ವಸಂತಿ, ಉಪಾಧ್ಯಕ್ಷರುಗಳಾದ ನೀಲಮ್ಮ, ಪಿ.ಎಂ.ರವಿ, ಅರುಣ್ ಕುಮಾರ್, ಖಜಾಂಚಿ ಶಾಂತಿ, ಪ್ರಧಾನ ಕಾರ್ಯದರ್ಶಿ ಆರ್.ಪಿ.ಚಂದ್ರಶೇಖರ್, ಕಾರ್ಯದರ್ಶಿಗಳಾದ ನಳಿನಿ ಸುವರ್ಣ, ಸುಚಿತ, ಸೂರಜ್, ಗುಲ್ಶನ್, ವಾಟೆಕಾಡು ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರಾದ ಕುಮಾರಸ್ವಾಮಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net