

ನರಗುಂದ: ವಿದ್ಯಾರ್ಥಿಗಳು ನಾಡಿನ ಭಾಷೆ, ನೆಲ-ಜಲ, ಸಂಸ್ಕೃತಿಯ ಅಭಿಮಾನ, ಪ್ರೀತಿ, ಗೌರವ ತೋರಬೇಕು ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶಗೌಡ ಪಾಟೀಲ ಹೇಳಿದರು.
ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜ್‌ನಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ಶುಕ್ರವಾರ ಕಾಲೇಜ್ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಹಳಗನ್ನಡ ಕಬ್ಬಿಣದ ಕಡಲೆಯಲ್ಲ ಉಪನ್ಯಾಸ ಮಾಲಿಕೆ-1 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಭಾಷೆಗೆ ತನ್ನದೆ ಆದ ಐತಿಹಾಸಿಕ ಹಿನ್ನೆಲೆ ಇದೆ. ಕನ್ನಡ ಭಾಷೆ ಅತ್ಯಂತ ಸರಳವಾಗಿದೆ. ಜಾಗತೀಕರಣದ ಪ್ರಭಾವದಿಂದ ಅದೆಷ್ಟೋ ಸಾಂಪ್ರದಾಯಿಕ ಕಲೆಗಳು, ವಸ್ತುಗಳು ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತಿವೆ. ನಮ್ಮ ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಎಂದರು.
ಕಸಾಪ ತಾಲೂಕು ಅಧ್ಯಕ್ಷ ಬಿ.ಸಿ. ಹನುಮಂತಗೌಡ್ರ ಮಾತನಾಡಿ, ನರಗುಂದ ತಾಲೂಕಿನ ಎಲ್ಲ ಕಾಲೇಜ್ ವಿದ್ಯಾರ್ಥಿಗಳಲ್ಲಿ ಭಾಷಾಭಿಮಾನ ಮೂಡಿಸಲು ಉಪನ್ಯಾಸ ಮಾಲಿಕೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ನಿವೃತ್ತ ಕನ್ನಡ ಉಪನ್ಯಾಸಕ ಪ್ರೊ. ಎಂ.ಎಸ್. ಯಾವಗಲ್ ಉಪನ್ಯಾಸ ನೀಡಿದರು. ಪ್ರಾಚಾರ್ಯ ಸಿ.ಎಸ್. ಸುಳ್ಳದ, ಡಾ.ಎಂ.ಪಿ. ಕುಲಕರ್ಣಿ, ಬಿ.ಎಂ. ಕೆಂಕೆನ್ನವರ, ಸುಧೀರ ಸಜ್ಜನ, ಸುಜಾತಾ ಮೆಳವಂಕಿ, ಬಿ.ಆರ್. ಮಹದೇವಪ್ಪನವರ, ಎನ್.ಬಿ. ಭಜಂತ್ರಿ, ಎಚ್.ಎ. ಮುದಿಯಪ್ಪನವರ, ನೀಲಕಂಠ ಮಡಿವಾಳರ, ಎಸ್.ಜಿ. ಮಣ್ಣೂರಮಠ ಇದ್ದರು. ಪ್ರೊ. ಆರ್.ಕೆ. ಐನಾಪೂರ ಕಾರ್ಯಕ್ರಮ ನಿರ್ವಹಿಸಿದರು.