

ಬೆಟ್ಟದಪುರ: ಸಮೀಪದ ಹಾರನಹಳ್ಳಿ ಗ್ರಾಮದ ಹೊರವಲಯದಲ್ಲಿ ಭಾನುವಾರ ತಡರಾತ್ರಿ ಚಿರತೆಯೊಂದು ಕಾಣಿಸಿಕೊಂಡು, ಕರುವಿನ ಮೇಲೆ ದಾಳಿಗೆ ಯತ್ನಿಸಿತು. ಅದೃಷ್ಟವಶಾತ್ ಕರು ಪ್ರಾಣಾಪಾಯದಿಂದ ಪಾರಾಗಿದೆ.
ಚಪ್ಪರದಹಳ್ಳಿ ಗ್ರಾಮದ ಸತೀಶ್ ಬಿನ್ ಗೋವಿಂದೇಗೌಡ ಎಂಬುವರ ಕರುವಿನ ಮೇಲೆ ಸೋಮವಾರ ರಾತ್ರಿ ಚಿರತೆ ದಾಳಿ ನಡೆಸಿದೆ. ಈ ವೇಳೆ ಪಕ್ಕದಲ್ಲಿದ್ದ ನಾಯಿಗಳು ಬೊಗಳಲು ಆರಂಭಿಸಿದ ಕಾರಣ ಚಿರತೆಯು ಪರಾರಿಯಾಗಿದೆ. ಕರುವಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸದ್ಯ ಪ್ರಾಣಾಪಾಯದಿಂದ ಪಾರಾಗಿದೆ.
ಈ ಭಾಗದಲ್ಲಿ ಆಗಾಗ್ಗೆ ಚಿರತೆ ಕಾಣಿಸಿಕೊಳ್ಳುತ್ತಿರುವುದರಿಂದ ಭಯದ ವಾತಾವರಣ ಸೃಷ್ಟಿಯಾಗಿದೆ. ಅರಣ್ಯ ಇಲಾಖೆಯು ಈ ಬಗ್ಗೆ ಹೆಚ್ಚಿನ ಒತ್ತು ನೀಡಿ ಚಿರತೆ ಸೆರೆ ಹಿಡಿಯಲು ಕ್ರಮವಹಿಸಬೇಕು ಎಂದು ಸತೀಶ್ ಮನವಿ ಮಾಡಿಕೊಂಡಿದ್ದಾರೆ.