ಸವರ್ಣೀಯ-ದಲಿತರ ಸಹಭೋಜನ: ಅಸ್ಪೃಶ್ಯತೆ ನಿವಾರಣೆಗೆ ಪಣ

18 Klr 08b
Published on

ಕೋಲಾರ: ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ವೇಮಗಲ್ ಹೋಬಳಿಯ ತೋಕಲಘಟ್ಟದಲ್ಲಿ ಉಪನ್ಯಾಸಕ ಡಾ. ಎಂ.ರವೀಂದ್ರ ಹಾಗೂ ಕೆ.ಎಸ್.ನಳಿನಾ ದಂಪತಿ ಮನೆಯಲ್ಲಿ ಮಂಗಳವಾರ ಸಮಾನತೆಗಾಗಿ ಸಹಭೋಜನ ಮತ್ತು ದಲಿತರ ಮನೆ ಪ್ರವೇಶ ಕಾರ್ಯಕ್ರಮ ನಡೆಯಿತು.

ಅಸ್ಪೃಶ್ಯತೆ ನಿರ್ಮೂಲನೆ ಆಂದೋಲನ ಕೈಗೊಂಡಿರುವ ಬಾಲಕರ ಸರ್ಕಾರಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಶಿವಪ್ಪ ಅರಿವು ನೇತೃತ್ವದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸವರ್ಣೀಯರ ನಿವಾಸಕ್ಕೆ ಸ್ಥಳೀಯ ದಲಿತ ಸಮುದಾಯದ ಲಕ್ಷ್ಮಮ್ಮ ಹಾಗೂ ನಾಗಮಣಿ ಪ್ರವೇಶಿಸಿದರು. ಈ ಇಬ್ಬರನ್ನು ಕುಟುಂಬದವರು ಆರತಿ ಬೆಳಗಿ, ಗುಲಾಬಿ ನೀಡಿ ಆತ್ಮೀಯವಾಗಿ ಮನೆಯೊಳಗೆ ಸ್ವಾಗತಿಸಿದರು. ಬಳಿಕ ಪೊಲೀಸರು, ಮುಖಂಡರು, ಗ್ರಾಮಸ್ಥರು, ಶಾಲಾ ಮಕ್ಕಳ ಜತೆಗೆ ಸಹ ಭೋಜನ ನಡೆಯಿತು.

ನಾಗರಿಕ ಹಕ್ಕು ಜಾರಿ: ಡಿವೈಎಸ್ಪಿ ಕೆ.ಎಸ್. ರಮೇಶ್ ಮಾತನಾಡಿ, ಮನೆಯೊಳಗೆ ನಾಯಿ, ಬೆಕ್ಕು ಸೇರಿಸುತ್ತೇವೆ. ಆದರೆ, ನಮ್ಮ ರೀತಿಯೇ ಇರುವ ಮನುಷ್ಯರನ್ನು ದಲಿತರೆಂಬ ಕಾರಣಕ್ಕೆ ಮನೆಯೊಳಗೆ ಬಿಟ್ಟುಕೊಳ್ಳುವುದಿಲ್ಲ. ಇದು ಸಮಾಜದ ವಿಚಿತ್ರ. ಮನೆ ಕಟ್ಟುವವರು ತುಂಬಾ ಜನರಿದ್ದಾರೆ. ಆದರೆ, ಮನಸ್ಸು ಕಟ್ಟುವವರ ಅಗತ್ಯವಿದೆ. ಬಲತ್ಕಾರದಿಂದ ಏನೂ ಮಾಡಲು ಸಾಧ್ಯವಿಲ್ಲ. ಮನಃ ಪರಿವರ್ತನೆಯಿಂದ ಮನಸ್ಸು ಬದಲಾಯಿಸಲು ಸಾಧ್ಯ. ಜಾತೀಯತೆ ಪೋಷಣೆ ಮಾಡಿದವರು, ಸಮಾನತೆ ವಿರೋಧಿಸಿದವರು ಇತಿಹಾಸದಲ್ಲಿ ಉಳಿಯುವುದಿಲ್ಲ. ಮಾನವೀಯತೆಗಾಗಿ ಮಿಡಿಯುವರು ಮಾತ್ರ ಇತಿಹಾಸದಲ್ಲಿ ಉಳಿಯುತ್ತಾರೆ ಎಂದರು.

ಪ್ರಾಧ್ಯಾಪಕ ಡಾ. ಶಿವಪ್ಪ ಅರಿವು ಮಾತನಾಡಿ, 2014ರಲ್ಲಿ ಸವರ್ಣೀಯರ ಮನೆಗೆ ದಲಿತರ ಪ್ರವೇಶ ಕಾರ್ಯಕ್ರಮ ಆರಂಭವಾಯಿತು. 8 ವರ್ಷಗಳಲ್ಲಿ ಬಹಳ ಕಡೆ ಇಂಥ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಯಶಸ್ವಿಯಾಗಿದೆ. ಆರಂಭದಲ್ಲಿ ಮನೆಯೊಳಗೆ ಬಿಟ್ಟುಕೊಳ್ಳಲು ಕೆಲವರು ಭಯಪಟ್ಟಿದ್ದೂ ಇದೆ. ಆದರೆ, ಸಾಮಾಜಿಕ ಬದಲಾವಣೆ ಇಂಥ ಹೆಜ್ಜೆಗಳಿಂದಲೇ ಸಾಧ್ಯ ಎಂಬುದು ಎಲ್ಲರ ಅರಿವಿಗೆ ಬಂದಿದೆ ಎಂದರು.

ಭೀಮಸೇನೆ ಅಧ್ಯಕ್ಷ ಪಂಡಿತ ಮುನಿವೆಂಕಟಪ್ಪ ಮಾತನಾಡಿ, ಗ್ರಾಮಾಂತರ ಮಟ್ಟದಲ್ಲಿ ಜಾತಿ ಅಳಿಸುವುದು ಅಷ್ಟು ಸುಲಭವಲ್ಲ. ಹೀಗಾಗಿ, ದಲಿತರಿಗೆ ಪ್ರವೇಶಕಲ್ಪಿಸಿರುವ ರವೀಂದ್ರ ಅವರ ಹೆಜ್ಜೆ ಶ್ಲಾಘನೀಯ. ಶಿವಪ್ಪ ಅರಿವು ಜಾತಿ ಭೇದ ಅಳಿಸುವ ಕೆಲಸ ಮಾಡುತ್ತಿದ್ದಾರೆ. ಸಮಾಜದ ಅಂಕು-ಡೊಂಕು ತಿದ್ದುವ ಹಾಗೂ ಅಸಮಾನತೆ ತೊಡೆದುಹಾಕುವ ಕಾರ್ಯ ಪ್ರಸ್ತುತ ಕಾಲಘಟ್ಟದಲ್ಲಿ ಅಗತ್ಯವಿದೆ ಎಂದರು.

ಕಾಂಗ್ರೆಸ್ ಮುಖಂಡ ಉದಯಶಂಕರ್ ಮಾತನಾಡಿ, ಜನರು ಅರಿತು ನಡೆದಿದ್ದರೆ ಇಂಥ ಕಾರ್ಯಕ್ರಮ ಬೇಕಿರಲಿಲ್ಲ. ಆದರೆ, ಅದು ಸಾಧ್ಯವಾಗದ ಕಾರಣ ದಲಿತರಿಗೆ ಪ್ರವೇಶ ಕಲ್ಪಿಸುವ ಇಂಥ ಕಾರ್ಯಕ್ರಮ ಅನಿವಾರ್ಯವಾಗಿದೆ. ಗುಡಿಯಲ್ಲಿರುವ ದೇವರಿಗೆ ನಮಸ್ಕಾರ ಮಾಡುವುದಕ್ಕಿಂತ ಅಂಬೇಡ್ಕರ್ ತತ್ವ, ಬಸವಣ್ಣನ ವಚನ ಓದಬೇಕು. ಸಹಬಾಳ್ವೆಯಿಂದ ಬದುಕಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ದಲಿತ ಮುಖಂಡ ಟಿ.ವಿಜಯಕುಮಾರ್ ಮಾತನಾಡಿ, ಯಾವುದೇ ಕಾರ್ಯಕ್ಕೆ ಮನಸ್ಸು ಮುಖ್ಯ. ಮನೆ ಕಟ್ಟುವವರು ಮುಂದೆ ದೇಶವನ್ನೂ ಕಟ್ಟುತ್ತಾರೆ. ಬ್ರಾಹ್ಮಣ ಸಮುದಾಯದ ಕುದ್ಮುಲ್ ರಂಗರಾವ್ ದಲಿತ ಮಕ್ಕಳಿಗೆ ಪಾಠ ಮಾಡುತ್ತಿದ್ದಾಗ ಸಾಕಷ್ಟು ವಿರೋಧ ವ್ಯಕ್ತವಾಯಿತು. ಆದರೆ, ಛಲಬಿಡದೆ ಆ ಕಾರ್ಯ ಮುಂದುವರಿಸಿದರು. ಅಂಥ ಮನಸ್ಸು ರವೀಂದ್ರ ಅವರಿಗೆ ಬಂದಿದೆ ಎಂದರು.

ವೇಮಗಲ್ ಪ್ರೊಬೇಷನರಿ ಎಸ್.ಐ. ಸಿದ್ದನಗೌಡ, ರೈತ ಮುಖಂಡ ಶ್ರೀನಿವಾಸಗೌಡ, ಸಹ ಪ್ರಾಧ್ಯಾಪಕ ಡಾ. ಸಿ.ಎ.ರಮೇಶ್, ಶ್ರೀನಿವಾಸಗೌಡ, ನಿರೂಪಕಿ ಮಂಜುಳಾ ಕೊಂಡರಾಜನಹಳ್ಳಿ, ಯುವಶಕ್ತಿ ಮುಖಂಡ ಸುಬ್ಬು, ವಿವಿಧ ಸಂಘಟನೆಗಳ ಮುಖಂಡರಾದ ರಮೇಶ್, ನಾಗನಾಳ ಮುನಿಯಪ್ಪ, ವಿಜಯಕುಮಾರ್, ತಾಲೂಕು ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ವಾಸೀಂ, ಡಾ. ರಮೇಶ್, ಮಧು, ರವೀಂದ್ರ, ಮುನುಗೌಡ, ದೇವರಾಜ್, ನಾರಾಯಣಸ್ವಾಮಿ, ಗ್ರಾಮಸ್ಥರು, ಶಾಲಾ ಮಕ್ಕಳು ಇದ್ದರು.

ದಲಿತರೂ ಮನುಷ್ಯರೇ. ಬೇರೆ ಜಾತಿ ಸಮುದಾಯಗಳ ಮನೆ, ದೇಗುಲದೊಳಗೆ ಪ್ರವೇಶಿಸುವಂತಿರಬೇಕು. ದಲಿತರು ಎಂಬ ಕಾರಣಕ್ಕೆ ಆಚೆ ನಿಲ್ಲುವ ಪದ್ಧತಿ ತೊಲಗಬೇಕು. ಸಮಾನತೆ ಮೂಡಬೇಕು. ಒಂದೇ ದಿನಕ್ಕೆ ಬದಲಾವಣೆ ಆಗಲ್ಲ. ಆದರೆ, ಮೊದಲ ಹೆಜ್ಜೆ ಇಡಬೇಕು.
ಡಾ. ಶಿವಪ್ಪ, ಪ್ರಾಧ್ಯಾಪಕ

ಇತಿಹಾಸದಲ್ಲಿ ಉಳಿಯುವಂಥ ಕೆಲಸ ಮಾಡೋಣ. ಮನುಜಪಥ, ವಿಶ್ವಪಥದಲ್ಲಿ ನಡೆಯೋಣ. ಮಾನವೀಯತೆಯಿಂದಿಗೆ ವಿಶ್ವಮಾನವರಾಗೋಣ, ಮನುಷ್ಯರಾಗಿ ಬಾಳೋಣ.
ಶಿವರಾಜ್, ಇನ್‌ಸ್ಪೆಕ್ಟರ್, ವೇಮಗಲ್ ಠಾಣೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net