

ಸವಣೂರ: ರಾಜ್ಯ, ರಾಷ್ಟ್ರದಲ್ಲಿ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿ ವಿವಿಧ ಹಂತದ ಉನ್ನತ ಸ್ಥಾನದಲ್ಲಿರುವ ಸಮಾಜ ಬಾಂಧವರ ಕೈಬಲ ಪಡಿಸಲು ಸಂಘಟನೆಗೆ ಒತ್ತು ನೀಡುವುದು ಅವಶ್ಯವಾಗಿದೆ ಎಂದು ತಾಲೂಕು ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಚನ್ನಬಸಪ್ಪ ಅಂಗಡಿ ತಿಳಿಸಿದರು.
ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕದ ವತಿಯಿಂದ ಪಟ್ಟಣದ ಐಬಿಯಲ್ಲಿ ಶನಿವಾರ ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲೂಕಾ ಬಣಜಿಗ ಸಮಾಜದ ಸಂಘ ಉದ್ಘಾಟನೆ, ಸಮಾಜದ ತಾಲೂಕು ಮಟ್ಟದ ಪ್ರಥಮ ಸಮಾವೇಶ, ಹಿರಿಯರಿಗೆ ಹಾಗೂ ಎಸ್ಎಸ್ಎಲ್ಸಿ, ಪಿಯು ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭದ ಆಮಂತ್ರಣ ಪತ್ರಿಕೆ, ಭಿತ್ತಿ ಪತ್ರ ಬಿಡುಗಡೆಗೊಳಿಸಲಾಯಿತು.
ಸಂಘದ ಉಪಾಧ್ಯಕ್ಷ ಮಂಜುನಾಥ ಶೆಟ್ಟರ ಪ್ರಾಸ್ತಾವಿಕವಾಗಿ ಮಾತನಾಡಿ, ಪಟ್ಟಣದ ಲಲಾಟೇಶ್ವರ ಕಲ್ಯಾಣ ಮಂಟಪದಲ್ಲಿ ಜುಲೈ 30 ರಂದು ಸಂಘದ ಉದ್ಘಾಟನೆ, ಸಮಾಜದ ತಾಲೂಕು ಮಟ್ಟದ ಪ್ರಥಮ ಸಮಾವೇಶ, ವಿವಿಧ ರೀತಿಯ ಸಾಮಾಜಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಬೆಳಗ್ಗೆ 10.30ಕ್ಕೆ ಸಮಾಜದ ಹಿರಿಯರಿಗೆ ಸನ್ಮಾನ, ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭವನ್ನು ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಸಂಸ್ಥಾಪಕ ಕಾರ್ಯದರ್ಶಿ ಗವಿಸಿದ್ದಪ್ಪ ಕೊಪ್ಪಳ ಉದ್ಘಾಟಿಸುವರು. ಕಲ್ಮಠದ ಶ್ರೀ ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ವಿವಿಧ ಸಾಧಕರು ಹಾಗೂ ಇತರರು ಪಾಲ್ಗೊಳ್ಳುವರು. ಮೊಬೈಲ್ ಮಲ್ಲಪ್ಪ ಅವರಿಂದ ಹಾಸ್ಯ ಕಾರ್ಯಕ್ರಮ ಜರುಗಲಿದೆ.
ಮಧ್ಯಾಹ್ನ 2 ಗಂಟೆಗೆ ಸವಣೂರ ತಾಲೂಕು ಬಣಜಿಗ ಸಮಾಜದ ಸಂಘ ಉದ್ಘಾಟನೆ ಹಾಗೂ ಸಮಾವೇಶ ಸಮಾರಂಭ ಜರುಗಲಿದೆ. ಮಾಜಿ ಮುಖ್ಯಮಂತ್ರಿ, ಶಾಸಕ ಬಸವರಾಜ ಬೊಮ್ಮಾಯಿ ಅವರು ಉದ್ಘಾಟನೆ ನೆರವೇರಿಸುವರು. ಮಾಜಿ ಮುಖ್ಯಮಂತ್ರಿ, ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ ಚಾಲನೆ ನೀಡುವರು. ತಾಲೂಕು ಸಂಘದ ಅಧ್ಯಕ್ಷ ಚನ್ನಬಸಪ್ಪ ಅಂಗಡಿ ಅಧ್ಯಕ್ಷತೆ ವಹಿಸುವರು.
ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಶಂಕರ ಬಿದರಿ ಉಪನ್ಯಾಸ ನೀಡುವರು. ಚಿತ್ರ ನಟ ದೊಡ್ಡಣ್ಣ ಹಾಗೂ ವಿವಿಧ ರಾಜಕೀಯ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಪದಾಧಿಕಾರಿಗಳಾದ ಗುರು ಅಂಗಡಿ, ಶಿವಕುಮಾರ ತೆಗ್ಗಿಹಳ್ಳಿ, ಶಾಂತಪ್ಪ ಪಂಚಪ್ಪನವರ, ಶೇಖರ ಅಂಗಡಿ, ವೀರಣ್ಣ ಪಟ್ಟಣಶೆಟ್ಟಿ, ಗಣೇಶ ಬೆಳ್ಳಟ್ಟಿ, ಬಸವರಾಜ ಮೆಣಸಿನಕಾಯಿ, ಬಸವರಾಜ ಹಾಲಗಿ, ಜಗದೀಶ ದೇಟಿನ ಹಾಗೂ ಇತರರು ಪಾಲ್ಗೊಂಡಿದ್ದರು. ಮಂಜುನಾಥ ಬೆಣ್ಣಿ ನಿರ್ವಹಿಸಿದರು.