

ಸವಣೂರ: ತಾಲೂಕಿನ ಗ್ರಾಮೀಣ ಪ್ರದೇಶದ ಕೆಲ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಸಂಬಂಧಪಟ್ಟ ಇಲಾಖೆಗಳು ಕಂಡೂ ಕಾಣದಂತಿವೆ. ಈ ನಡುವೆ ಖಾಸಗಿ ಮೊಬೈಲ್ ಕಂಪನಿಗಳು ಕೇಬಲ್ ಹಾಕಲು ರಸ್ತೆ ಅಗೆದಿರುವುದರಿಂದ ಜನರು ಮತ್ತಷ್ಟು ಪರದಾಡುವಂತಾಗಿದೆ. ಕಳಲಕೊಂಡ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಪುರ ಪ್ರವೇಶದಿಂದ ಗ್ರಾಮದ ಹದ್ದು ಮುಕ್ತಾಯದವರೆಗೆ ರಸ್ತೆ ಸಂಪೂರ್ಣ ಹದೆಗೆಟ್ಟಿದೆ. ಈ ಕುರಿತು ಲೋಕೋಪಯೋಗಿ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿ, ಸ್ಥಳೀಯ ಶಾಸಕರಿಂದ ಹೇಳಿಸಿದರೂ ರಸ್ತೆ ದುರಸ್ತಿ ಮಾಡಿಲ್ಲ. ಜಲ್ಲಾಪುರ ಗ್ರಾಪಂ ವ್ಯಾಪ್ತಿಗೆ ಒಳಪಡುವ ಕಳಲಕೊಂಡ ಗ್ರಾಮದ ರಸ್ತೆ ಕುರಿತು ಮಾಹಿತಿ ಪಡೆಯಲು ಲೋಕೋಪಯೋಗಿ ಇಲಾಖೆಗೆ ಸಂರ್ಪಸಿದರೆ, ಜಿಪಂ (ಗ್ರಾಪಂ)ಗೆ ಸಂಬಂಧಿಸಿದ ರಸ್ತೆ ಎಂದು ಹೇಳುತ್ತಾರೆ. ಜಿಪಂಗೆ ಸಂರ್ಪಸಿದರೆ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ್ದು ಎಂದು ಜಾರಿಕೊಳ್ಳುತ್ತಾರೆ. ಹೀಗಾದರೆ ರಸ್ತೆ ಅಭಿವೃದ್ಧಿ ಕುರಿತು ಯಾರಿಗೆ ಒತ್ತಾಯಿಸಬೇಕು ಎಂಬುದು ಸ್ಥಳೀಯರಿಗೆ ತಿಳಿಯದಾಗಿದೆ. ಖಾಸಗಿ ಮೊಬೈಲ್ ಕಂಪನಿ ಹಾವಳಿ: ಗ್ರಾಮದ ರಸ್ತೆ ಮೊದಲೇ ಸಂಪೂರ್ಣ ಹದಗೆಟ್ಟಿದೆ. ಅಲ್ಪ ಮಳೆಯಾದರೂ ರಸ್ತೆ ಓಡಾಡದಂತಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಖಾಸಗಿ ಮೊಬೈಲ್ ಕಂಪನಿ ರಸ್ತೆ ಅಗೆದು ಕೇಬಲ್ ಅಳವಡಿಸಿದೆ. ಕೃಷಿ ಭೂಮಿಯಲ್ಲಿ ಕೇಬಲ್ ಅಳವಡಿಕೆಗಾಗಿ ಸಂಬಂಧಪಟ್ಟ ಗ್ರಾಪಂ ಪರವಾನಗಿ ಪಡೆದಿದೆ. ಆದರೆ, ರಸ್ತೆ ಅಗೆದು ಕೇಬಲ್ ಅಳವಡಿಸಲಾಗಿದೆ ಎಂದು ಗ್ರಾಪಂ ಅಧಿಕಾರಿಗಳು ದೃಢಪಡಿಸುತ್ತಾರೆ. ಖಾಸಗಿ ಕಂಪನಿಗಳು ಸರ್ಕಾರದ ಆಸ್ತಿ ಹಾಗೂ ಸಾರ್ವಜನಿಕರ ಉಪಯುಕ್ತ ರಸ್ತೆಯನ್ನು ಹಾಳು ಮಾಡಿದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಅನುಮಾನಕ್ಕೆ ಎಡೆಮಾಡಿದೆ. ಜಲ್ಲಾಪುರ ಗ್ರಾಪಂ ವತಿಯಿಂದ ಖಾಸಗಿ ಮೊಬೈಲ್ ಕಂಪನಿ ಪಡೆದ ಪರವಾನಗಿ ಕುರಿತು ತನಿಖೆ ಕೈಗೊಳ್ಳಬೇಕು. ರಸ್ತೆ ಹಾಳು ಮಾಡುತ್ತಿರುವ ಖಾಸಗಿ ಕಂಪನಿ ವಿರುದ್ಧ ಸೂಕ್ತ ಕಾನೂನು ಕೈಗೊಂಡು, ಹಾನಿಯನ್ನು ಭರಣ ಮಾಡಿಸಬೇಕು. ಕೂಡಲೇ ರಸ್ತೆ ಮರು ನಿರ್ವಣಕ್ಕೆ ಮುಂದಾಗಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.
ರಸ್ತೆ ಲೋಕೋಪಯೋಗಿ ಇಲಾಖೆಗೆ ಸೇರಿದೆ. ಖಾಸಗಿ ಮೊಬೈಲ್ ಕಂಪನಿಗೆ ರಸ್ತೆ ಅಗೆಯಲು ಪರವಾನಗಿ ನೀಡಿದ್ದು ಗ್ರಾಪಂ. ಇದು ಹೇಗೆ ಸಾಧ್ಯ. ಗ್ರಾಪಂ ಬೊಕ್ಕಸಕ್ಕೆ ಹಣ ಕಟ್ಟಿಸಿಕೊಂಡಿದ್ದಾರೆ. ಎಲ್ಲ ಗೊಂದಲಕ್ಕೆ ತೆರೆ ಎಳೆಯಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ತನಿಖೆ ಕೈಗೊಳ್ಳುವುದು ಅವಶ್ಯ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿ ಕೂಡಲೇ ರಸ್ತೆ ನಿರ್ವಣಕ್ಕೆ ಮುಂದಾಗಬೇಕು. ತಪ್ಪಿದಲ್ಲಿ ಹೋರಾಟ ಅನಿವಾರ್ಯವಾಗಲಿದೆ. | ಗಂಗಪ್ಪ ಹರಿಜನ ಕಳಲಕೊಂಡ ನಿವಾಸಿ ಖಾಸಗಿ ಮೊಬೈಲ್ ಕಂಪನಿ ಕೇಬಲ್ ಅಳವಡಿಸಲು ಪರವಾನಗಿಗಾಗಿ ಮನವಿ ಸಲ್ಲಿಸಿದ್ದರು. ಈ ಕುರಿತು ಆಡಳಿತ ಮಂಡಳಿ ಹಾಗೂ ಸರ್ಕಾರದ ಷರತ್ತು ಅನ್ವಯ ಪರವಾನಗಿ ನೀಡಲಾಗಿತ್ತು. ಆದರೆ, ಕಂಪನಿಯವರು ರಸ್ತೆಗೆ ಹೊಂದಿಕೊಂಡು ಅಗೆದು ಕೇಬಲ್ ಅಳವಡಿಸಿರುವ ಹಿನ್ನೆಲೆಯಲ್ಲಿ ರಸ್ತೆ ಮತ್ತಷ್ಟು ಹಾಳಾಗಿದೆ. ಈ ಕುರಿತು ತಪ್ಪಿತಸ್ಥರ ವಿರುದ್ಧ ಕ್ರಮಕ್ಕಾಗಿ ನೋಟಿಸ್ ಜಾರಿ ಮಾಡಲಾಗಿದೆ. | ವೀರೇಶ ಅವಾರಿ ಪಿಡಿಒ ಜಲ್ಲಾಪುರ ಗ್ರಾಪಂ