

ಸವಣೂರ: ಗ್ರಾಮೀಣ ಮಟ್ಟದಲ್ಲಿ ವಿತರಕರು ಸಂಘಟಿತರಾದಲ್ಲಿ ಮಾತ್ರ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಯನ್ನು ಪಡೆಯಲು ಸಾಧ್ಯ ಎಂದು ಜಿಲ್ಲಾ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ ಸಂಕಪ್ಪ ಮಾರನಾಳ ಹೇಳಿದರು.
ಪತ್ರಿಕಾ ವಿತರಕರ ಜಿಲ್ಲಾ ಮಟ್ಟದ ಸಮಾವೇಶ ಏರ್ಪಡಿಸುವ ಕುರಿತು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪತ್ರಿಕಾ ವಿತರಕರ ಸಂಘ ರಾಷ್ಟ್ರ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಆದರೆ, ರಾಜ್ಯದ ತಾಲೂಕು ಮತ್ತು ಗ್ರಾಮೀಣ ಮಟ್ಟದಲ್ಲಿ ಪತ್ರಿಕಾ ವಿತರಕರು ಸಂಘಟನೆ ಕುರಿತು ಆಸಕ್ತಿ ತೋರದಿರುವುದು ಬೇಸರದ ಸಂಗತಿ. ಪ್ರತಿ ಗ್ರಾಮಗಳಲ್ಲಿರುವ ಪತ್ರಿಕೆ ವಿತರಕರು ಕೂಡಲೇ ಪತ್ರಿಕೆ ವಿತರಕರ ತಾಲೂಕು ಸಂಘಟನೆಯ ಪದಾಧಿಕಾರಿಗಳನ್ನು ಸಂಪರ್ಕಿಸಿ ಸದಸ್ಯತ್ವ ಪಡೆದು, ಕೆಲ ಯೋಜನೆಗಳ ಲಾಭ ಪಡೆಯಲು ಮುಂದಾಗಬೇಕು ಎಂದರು. ಜಿಲ್ಲಾ ಪತ್ರಿಕಾ ವಿತರಕರ ಒಕ್ಕೂಟದ ಕಾರ್ಯದರ್ಶಿ ಜಯಪ್ಪ ಬಣಕಾರ ಮಾತನಾಡಿ, ಜಿಲ್ಲಾ ಸಮಾವೇಶ ಆಯೋಜನೆ ಹಿನ್ನೆಲೆಯಲ್ಲಿ ಜಿಲ್ಲಾ ಸಮಿತಿ ಪದಾಧಿಕಾರಿಗಳು ಪ್ರತಿ ತಾಲೂಕು ಘಟಕಕ್ಕೆ ಭೇಟಿ ನೀಡಿ ಸಲಹೆ, ಸಹಕಾರ ಪಡೆಯಲಾಗುತ್ತಿದೆ. ಒಂದು ವಾರದಲ್ಲಿ ಸ್ಥಳ, ದಿನಾಂಕ ಕುರಿತು ತಿಳಿಸಲಾಗುವುದು ಎಂದರು. ತಾಲೂಕು ಘಟಕದ ಗೌರವಾಧ್ಯಕ್ಷ ನಾಗರಾಜ ಕುರಗೋಡಿ, ಉಪಾಧ್ಯಕ್ಷ ರಾಮು ಕುಂದ್ರಳ್ಳಿ ಮಾತನಾಡಿ, ಸವಣೂರ ತಾಲೂಕು ಘಟಕದ ವತಿಯಿಂದ ಜಿಲ್ಲಾ ಸಮಾವೇಶಕ್ಕೆ ಅವಶ್ಯವಿರುವ ಸಹಾಯ, ಸಹಕಾರ ನೀಡಲಾಗುವುದು ಎಂದರು. ಪತ್ರಿಕಾ ವಿತರಕರ ಸಂಘದ ಪದಾಧಿಕಾರಿಗಳಾದ ಬೀರಪ್ಪ ಕುರಗುಂದ, ಮಂಜುನಾಥ ಪಿಳ್ಳಿ, ರುದ್ರಮುನಿ ಹಿರೇಮಠ, ಪರಮೇಶಿ ಮಲ್ಲಮ್ಮನವರ, ಉಳವಯ್ಯ ಹಿರೇಮಠ, ಸೋಮಣ್ಣ ಶಿರಹಟ್ಟಿ, ನಿಂಗಪ್ಪ ನಾಗನೂರ, ಅನಿಲಕುಮಾರ ಹೊಂಬಳದ, ಗಣೇಶಗೌಡ ಪಾಟೀಲ, ಅಶೋಕ ಕಾಳಶೆಟ್ಟಿ, ಶಂಕ್ರಯ್ಯ ಹಿರೇಮಠ ಪಾಲ್ಗೊಂಡಿದ್ದರು. ವಿತರಕರಾದ ಚಂದ್ರಶೇಖರ ಅಕ್ಕಿ ಹಾಗೂ ಆನಂದ ಮತ್ತಿಗಟ್ಟಿ ನಿರ್ವಹಿಸಿದರು.