ಸವಣೂರ ಪುರಸಭೆ ಬಜೆಟ್ ಮಂಡನೆ: ರಸ್ತೆ, ಚರಂಡಿ, ಬಡಾವಣೆ ಅಭಿವೃದ್ಧಿಗೆ ಆದ್ಯತೆ

Savanur Purasabhe Budjet meeting
Published on

ಸವಣೂರ: ಸ್ಥಳೀಯ ಪುರಸಭೆಯಲ್ಲಿ ಅಧ್ಯಕ್ಷ ಅಲ್ಲಾವುದ್ದೀನ್ ಮನಿಯಾರ್ ಅಧ್ಯಕ್ಷತೆಯಲ್ಲಿ ಸೋಮವಾರ ಏರ್ಪಡಿಸಿದ್ದ ಸಭೆಯಲ್ಲಿ 2025-26ನೇ ಸಾಲಿನ ಬಜೆಟ್ ಅನ್ನು ಮುಖ್ಯಾಧಿಕಾರಿ ನೀಲಪ್ಪ ಹಾದಿಮನಿ ಮಂಡಿಸಿದರು.

ಪಟ್ಟಣದ ಅಭಿವೃದ್ಧಿಗಾಗಿ ಸರ್ಕಾರದ ವಿಶೇಷ ಅನುದಾನ ಹಾಗೂ ವಿವಿಧ ಮೂಲಗಳಿಂದ 29.59 ಕೋಟಿ ರೂ. ಸಂಗ್ರಹ ಮತ್ತು 29.17 ಕೋಟಿ ರೂ. ವೆಚ್ಚ ಮಾಡಲು ಯೋಜಿಸಲಾಗಿದ್ದು, 42 ಲಕ್ಷ ರೂ. ಉಳಿತಾಯ ನಿರೀಕ್ಷಿಸಲಾಗಿದೆ ಎಂದರು.

ರಾಜಸ್ವ ಖಾತೆಯಿಂದ 10.9 ಕೋಟಿ ರೂ., ಬಂಡವಾಳ ಖಾತೆಯಿಂದ 14.77 ಕೋಟಿ ರೂ., ಅಸಾಧಾರಣ ಖಾತೆಯಿಂದ 473 ಲಕ್ಷ ರೂ. ಸ್ವೀಕೃತಿ ನಿರೀಕ್ಷಿಸಲಾಗಿದೆ. ಆಸ್ತಿ ನಿರ್ವಣಕ್ಕಾಗಿ 14.12 ಕೋಟಿ ರೂ. ಅಸಾಧಾರಣ ವೆಚ್ಚ 4.73 ಕೋಟಿ ರೂ. ಕಾಯ್ದಿರಿಸಲಾಗಿದೆ ಎಂದರು.

ರಾಜಸ್ವ ಸಂಗ್ರಹಣೆ:

ಆಸ್ತಿ ತೆರಿಗೆ, ನೀರಿನ ಕಂದಾಯ, ಅಭಿವೃದ್ಧಿ ಶುಲ್ಕ, ಮಳಿಗೆ ಬಾಡಿಗೆಯಿಂದ ಹೆಚ್ಚಿನ ಆದಾಯ ನಿರೀಕ್ಷಿಸಲಾಗಿದೆ. ನೀರು ಬಳಕೆ ಶುಲ್ಕದಿಂದ 65 ಲಕ್ಷ ರೂ., ಹೊಸ ಸಂಪರ್ಕ, ದಂಡ, ಇತರೆ ಶುಲ್ಕಗಳಿಂದ 5 ಲಕ್ಷ ರೂ., ಆಸ್ತಿ ತೆರಿಗೆ 90 ಲಕ್ಷ ರೂ., ವಾಣಿಜ್ಯ ಮಳಿಗೆಗಳಿಂದ 16 ಲಕ್ಷ ರೂ., ವ್ಯಾಪಾರ ಪರವಾನಗಿ 3.30 ಲಕ್ಷ ರೂ., ಸಂತೆ ಹಾಗೂ ಮಾರುಕಟ್ಟೆ ಹರಾಜುಗಳಿಂದ 8.25 ಲಕ್ಷ ರೂ., ಎಸ್​ಡಬ್ಲುಎಂ ಶುಲ್ಕ 22 ಲಕ್ಷ ರೂ., ಕಟ್ಟಡ ಪರವಾನಗಿ 8 ಲಕ್ಷ ರೂ., ಅಭಿವೃದ್ಧಿ ಶುಲ್ಕ 6 ಲಕ್ಷ ರೂ., ಸಕ್ಕಿಂಗ್ ಯಂತ್ರದ ಬಾಡಿಗೆಯಿಂದ 1.50 ಲಕ್ಷ ರೂ., ಇತರೆ ಮೂಲಗಳಿಂದ 36.15 ಲಕ್ಷ ರೂ., ಸೇರಿ ಒಟ್ಟು 261.20 ಲಕ್ಷ ರೂ. ಸಂಗ್ರಹ ಗುರಿ ಹೊಂದಲಾಗಿದೆ.

ರಾಜ್ಯ ಹಣಕಾಸು ಯೋಜನೆ ಅನುದಾನ:

ಮುಕ್ತನಿಧಿ ಅನುದಾನ 60 ಲಕ್ಷ ರೂ., ವೇತನ ನಿಧಿ 437 ಲಕ್ಷ ರೂ., ವಿದ್ಯುತ್ ಬಿಲ್ ಪಾವತಿ ಅನುದಾನ 240 ಲಕ್ಷ ರೂ., ಕುಡಿಯುವ ನೀರಿನ ಪರಿಹಾರ ಯೋಜನೆ 11.50 ಲಕ್ಷ ಸೇರಿ ಒಟ್ಟು 668.50 ಲಕ್ಷ ರೂ. ಅನುದಾನದ ನಿರೀಕ್ಷೆಯಿದೆ. ಇದರಲ್ಲಿ ಪಟ್ಟಣ ವ್ಯಾಪ್ತಿಯಲ್ಲಿ ರಸ್ತೆ, ಕಾಲುವೆ, ಅಭಿವೃದ್ಧಿ ಕಾಮಗಾರಿ, ಸ್ಮಶಾನಗಳ ಅಭಿವೃದ್ಧಿ ಸೇರಿ ಹಲವಾರು ಯೋಜನೆ ರೂಪಿಸಲಾಗಿದೆ.

ಕೇಂದ್ರ ಹಣಕಾಸು ಆಯೋಗದಿಂದ 2 ಕೋಟಿ ರೂ. ಅನುದಾನ ಸಿಗುವ ನಿರೀಕ್ಷೆ ಹೊಂದಲಾಗಿದೆ. ಸರ್ಕಾರದಿಂದ ವಿಶೇಷ ಅನುದಾನದಡಿ 11 ಕೋಟಿ ರೂ., ಆಶ್ರಯ ಬಡಾವಣೆಗಳ ಅಭಿವೃದ್ಧಿಗೆ 10 ಲಕ್ಷ ರೂ., ಪೌರ ಕಾರ್ವಿುಕರ ಗೃಹಭಾಗ್ಯ ನಿರ್ವಣಕ್ಕೆ 20 ಲಕ್ಷ ರೂ. ಅನುದಾನ ನಿರೀಕ್ಷಿಸಲಾಗಿದೆ. ರಸ್ತೆ, ಚರಂಡಿ, ಸಣ್ಣ ಸೇತುವೆ, ನೀರು ಸರಬರಾಜು, ಬಡಾವಣೆ ವಿದ್ಯುದ್ದೀಕರಣ ಮಾರ್ಗಗಳು, ಪೌರಕಾರ್ವಿುಕರಿಗೆ ಮನೆಗಳ ನಿರ್ಮಾಣ ಸೇರಿದಂತೆ ವಿವಿಧ ಯೋಜನೆ ರೂಪಿಸಲಾಗಿದೆ.

ಉಪಾಧ್ಯಕ್ಷೆ ಖಮುರಿನ್ನಾಸಾ ಪಟೇಲ್, ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ ಕಲ್ಮಠ, ಮುಖ್ಯ ಇಂಜಿನಿಯರ್ ನಾಗರಾಜ ಮಿರ್ಜಿ, ವ್ಯವಸ್ಥಾಪಕ ಮಹೇಶ ದೊಡ್ಡಣ್ಣವರ ಹಾಗೂ ಸದಸ್ಯರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net