ಕಡಬ: ಮಳೆಗಾಲದಲ್ಲಿ ಆಗಬಹುದಾದ ಸಮಸ್ಯೆಗಳನ್ನು ಈಗಲೇ ಗುರುತಿಸಿ ಪೂರ್ವಸಿದ್ಧತೆ ಮಾಡಬೇಕು. ಸಮಸ್ಯೆಯಾದ ಬಳಿಕ ಎಚ್ಚೆತ್ತುಕೊಳ್ಳುವುದಲ್ಲ. ಈ ಕುರಿತು ಸೂಕ್ತ ನಿರ್ಣಯ ಕೈಗೊಳ್ಳುವಂತೆ ಸವಣೂರು ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಸದಸ್ಯರು ಒತ್ತಾಯಿಸಿದರು. ಗ್ರಾ.ಪಂ. ಅಧ್ಯಕ್ಷೆ ಸುಂದರಿ ಬಿ.ಎಸ್. ಅಧ್ಯಕ್ಷತೆಯಲ್ಲಿ ಗ್ರಾ.ಪಂ.ನ ಕುಮಾರಧಾರಾ ಸಭಾಂಗಣದಲ್ಲಿ ಸಭೆ ನಡೆಯಿತು.
ವಿಷಯ ಪ್ರಸ್ತಾಪಿಸಿದ ಸದಸ್ಯ ತೀರ್ಥರಾಮ ಕೆಡೆಂಜಿ, ಕಳೆದ ವರ್ಷ ವಿಪರೀತ ಮಳೆಯಿಂದಾಗಿ ಸಾಕಷ್ಟು ಹಾನಿಯಾಗಿದೆ. ಸವಣೂರಿನ ಪಟ್ಟೆ ಎಂಬಲ್ಲಿ ಕಾಲುಸಂಕ ಮುರಿದು ಹೋಗಿ ಸಂಪರ್ಕ ಕಡಿತವಾಗಿತ್ತು. ಆ ಸಮಯದಲ್ಲಿ ಸ್ಥಳ ಪರಿಶೀಲನೆ ಮಾಡಿದ್ದು ಬಿಟ್ಟರೆ ಬೇರೆ ಏನೂ ಪ್ರಗತಿಯಾಗಿಲ್ಲ. ಈ ನಿಟ್ಟಿನಲ್ಲಿ ಈಗಲೇ ಅಂತಹ ಸಮಸ್ಯೆಗಳಿರುವ ಸ್ಥಳಗಳನ್ನು ಗುರುತಿಸಿ ಸಂಭಾವ್ಯ ಅಪಾಯದ ಬಗ್ಗೆ ಕ್ರಮಕೈಗೊಳ್ಳಿ ಎಂದರು.
ಗ್ರಾ.ಪಂ. ವ್ಯಾಪ್ತಿಯ ಸರ್ಕಾರಿ ಶಾಲೆ, ಅಂಗನವಾಡಿಗಳಿಗೆ ಗ್ರಾ.ಪಂ.ನಿಂದ ನಿರ್ದಿಷ್ಟ ಅನುದಾನ ನಿಗದಿ ಮಾಡಬೇಕು. ಶಾಲೆಗಳಿಗೆ ಶಿಕ್ಷಣ ಇಲಾಖೆ ಅನುದಾನ ನೀಡಬೇಕು ಎಂದು ಸತೀಶ್ ಅಂಗಡಿಮೂಲೆ ಆಗ್ರಹಿಸಿದರು.
ಕುಮಾರಮಂಗಲ ಹಿ.ಪ್ರಾ. ಶಾಲೆಯಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ಈಗಿರುವ ಕೊಳವೆಬಾವಿ ಬತ್ತಿಹೋಗಿದೆ. ದಿನನಿತ್ಯದ ಬಳಕೆಗೂ ತತ್ವಾರ ಇದೆ. ಕೂಡಲೇ ಕೊಳವೆಬಾವಿ ಕೊರೆಯಲು ಅನುದಾನ ನೀಡಬೇಕು ಎಂದು ಸದಸ್ಯೆ ಯಶೋದಾ ನೂಜಾಜೆ ಹೇಳಿದರು.
ಗ್ರಾ.ಪಂ. ಉಪಾಧ್ಯಕ್ಷೆ ಜಯಶ್ರೀ ಬಿ.ಎಸ್. ಉಪಸ್ಥಿತರಿದ್ದರು. ಸದಸ್ಯರಾದ ಅಬ್ದುಲ್ ರಝಾಕ್, ರಾಜೀವಿ ಶೆಟ್ಟಿ, ಚೆನ್ನು ಮುಂಡೋತಡ್ಕ, ಶೀನಪ್ಪ ಶೆಟ್ಟಿ ನೆಕ್ರಾಜೆ, ಸತೀಶ್ ಅಂಗಡಿಮೂಲೆ, ರಫೀಕ್, ಬಾಬು ಎನ್, ತಾರಾನಾಥ ಬೊಳಿಯಾಲ, ಭರತ್ ರೈ, ತೀರ್ಥರಾಮ ಕೆಡೆಂಜಿ, ಹರಿಕಲಾ ರೈ, ವಿನೋದಾ ರೈ, ಚೇತನಾ ಶಿವಾನಂದ, ಯಶೋದಾ ನೂಜಾಜೆ ಕಲಾಪದಲ್ಲಿ ಪಾಲ್ಗೊಂಡರು.
ಅಭಿವೃದ್ಧಿ ಅಧಿಕಾರಿ ವಸಂತ ಶೆಟ್ಟಿ ಸ್ವಾಗತಿಸಿದರು. ಸಿಬ್ಬಂದಿ ಪ್ರಮೋದ್ ಕುಮಾರ್ ರೈ, ದಯಾನಂದ ಎಂ, ಜಯಾ ಕೆ, ಜಯಶ್ರೀ, ಯತೀಶ್ ಕುಮಾರ್ ಸಹಕರಿಸಿದರು.
ಗ್ರಾಪಂ ಸದಸ್ಯರಿಗೆ ಬೇಕು ಇಎಸ್‌ಐ
ಗ್ರಾ.ಪಂ. ಸದಸ್ಯರಿಗೆ ಇಎಸ್‌ಐ ಸೌಲಭ್ಯ ಸರ್ಕಾರ ಒದಗಿಸಬೇಕು. ಜನರಿಂದ ಆಯ್ಕೆಯಾಗಿರುವ ಸದಸ್ಯರು ಊರಿನ ಸಮಸ್ಯೆಗೆ ಸ್ಪಂದಿಸುತ್ತಾರೆ. ಅದೇ ರೀತಿ ಸರ್ಕಾರ ಗ್ರಾಪಂ ಸದಸ್ಯರಿಗೆ ಇಎಸ್‌ಐ ಸೌಲಭ್ಯ ಒದಗಿಸಬೇಕು ಎಂದು ಸದಸ್ಯ ಸತೀಶ್ ಅಂಗಡಿಮೂಲೆ ಆಗ್ರಹಿಸಿದರು.