ಪ್ರತಿಷ್ಠೆಗೆ ನಲುಗಿದ ಸವಣೂರ ಸರ್ಕಾರಿ ಆಸ್ಪತ್ರೆ!

Savanur Govt Hospital
Published on

ಸವಣೂರ: ರಾಜಕೀಯ ಮುಖಂಡರ ಒಣ ಪ್ರತಿಷ್ಠೆಯಿಂದಾಗಿ ಜಿಲ್ಲೆಯ ಅತ್ಯುತ್ತಮ ತಾಲೂಕು ಸಾರ್ವಜನಿಕ ಆಸ್ಪತ್ರೆ ಎಂದು ಮೆಚ್ಚುಗೆ ಪಡೆದುಕೊಂಡಿರುವ ಪಟ್ಟಣದ ಆಸ್ಪತ್ರೆಯಲ್ಲಿ ನುರಿತ ವೈದ್ಯರ ತಂಡ ರೋಗಿಗಳ ಸೇವೆಗೆ ಪರದಾಡುವಂತಾಗಿದೆ.

100 ಹಾಸಿಗೆ ಸಾಮರ್ಥ್ಯ ಹೊಂದಿರುವ ಇಲ್ಲಿಯ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ ಡಾ. ಶಂಕರಗೌಡ ಹಿರೇಗೌಡ್ರ ಅಧಿಕಾರ ವಹಿಸಿಕೊಂಡ ನಂತರ ಮಾಜಿ ಮುಖ್ಯಮಂತ್ರಿ, ಶಾಸಕ ಬಸವರಾಜ ಬೊಮ್ಮಾಯಿ ಅವರ ಮಾರ್ಗದರ್ಶನದಲ್ಲಿ ಸುಸಜ್ಜಿತ ಆಸ್ಪತ್ರೆಯನ್ನಾಗಿ ಮಾಡಲು ಪಣ ತೊಟ್ಟಿದ್ದರು.

ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ವೈದ್ಯರು ಹಣ ಪಡೆಯುತ್ತಾರೆ ಎಂದು ಇತ್ತೀಚೆಗೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಆರೋಪಿಸಿದ್ದರು. ಹೀಗಾಗಿ ವೈದ್ಯರ ತಂಡ ಸೂಕ್ತ ಹಾಗೂ ಹೆಚ್ಚುವರಿ ಕಾರ್ಯನಿರ್ವಹಣೆಗೆ ಹಿಂದೇಟು ಹಾಕುವಂತಾಗಿದೆ ಎಂದು ಬಿಜೆಪಿಯ ಪ್ರಮುಖರು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ರಾಜಕೀಯ ನಾಯಕರುಗಳ ವೈಯಕ್ತಿಕ ಹಿತಾಸಕ್ತಿಯಿಂದಾಗಿ ಆಸ್ಪತ್ರೆಯಲ್ಲಿ ಸೂಕ್ತ ಸಲಕರಣೆ ಗಳಿದ್ದರೂ ಸಮರ್ಪಕ ಚಿಕಿತ್ಸೆ ನೀಡಲಾಗುತ್ತಿಲ್ಲ ಎಂದು ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.

14 ತಜ್ಞ ವೈದ್ಯರ ಹುದ್ದೆಗಳ ಪೈಕಿ 8 ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಎಲುಬು, ಕೀಲು ತಜ್ಞ, ಚರ್ಮರೋಗ ತಜ್ಞ, ತುರ್ತು ಚಿಕಿತ್ಸೆಗಾಗಿ ನಾಲ್ಕು ಹೆಚ್ಚುವರಿ ವೈದ್ಯರು ಹಾಗೂ 20 ಹಾಸಿಗೆಯ ಸಾಮರ್ಥ್ಯದ ಐಸಿಯುನಲ್ಲಿ ನುರಿತ ವೈದ್ಯಾಧಿಕಾರಿ ಮತ್ತು ಅರೆ ವೈದ್ಯಾಧಿಕಾರಿ, ಸಿಬ್ಬಂದಿ ಕೊರತೆ ಇದೆ.

ನವಾಬರ ಕಾಲದಲ್ಲಿ ನಿರ್ವಿುಸಿದ್ದ ಸಾರ್ವಜನಿಕ ಆಸ್ಪತ್ರೆಯನ್ನು ಹಲವು ವರ್ಷಗಳ ಹಿಂದೆ ನವೀಕರಣಗೊಳಿಸಲಾಗಿತ್ತು. ಆದರೆ, ಆಸ್ಪತ್ರೆಯ ಕಟ್ಟಡವನ್ನು ನೂತನವಾಗಿ ನಿರ್ವಿುಸುವುದು ಅವಶ್ಯವಾಗಿದೆ. ಈ ಕುರಿತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲಾಗಿದ್ದು, ಆಸ್ಪತ್ರೆಯ ನೂತನ ಕಟ್ಟಡ ನಿರ್ವಣಕ್ಕೆ ವಿಶೇಷ ಅನುದಾನ ನೀಡುವ ಭರವಸೆ ನೀಡಿದ್ದರು. ಆದರೆ, ಬದಲಾದ ರಾಜಕೀಯ ವ್ಯವಸ್ಥೆ ಹಿನ್ನೆಲೆಯಲ್ಲಿ ಇದುವರೆಗೂ ನೂತನ ಕಟ್ಟಡ ನಿರ್ವಣಕ್ಕೆ ಚಾಲನೆ ದೊರೆತಿಲ್ಲ.

ತಾಲೂಕು ಆಸ್ಪತ್ರೆಯಲ್ಲಿ ನುರಿತ ವೈದ್ಯರ ತಂಡ ಕಾರ್ಯ ನಿರ್ವಹಿಸುತ್ತಿದ್ದರೂ ಸ್ಥಳೀಯ ಹಾಗೂ ತಾಲೂಕಿನ ಜನರ ಸಹಕಾರದ ಕೊರತೆಯಿಂದ ನಿರೀಕ್ಷಿತ ಮಟ್ಟದಲ್ಲಿ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ವೈದ್ಯರು ಹೇಳುತ್ತಾರೆ.

ಪ್ರತಿ ತಿಂಗಳು 130ರಿಂದ 150ರವರೆಗೂ ಹೆರಿಗೆ ಆಗುತ್ತಿವೆ. ಅದರಲ್ಲಿ, 35ರಿಂದ 40 ಸಿಜೇರಿಯನ್ ಮಾಡಲಾಗುತ್ತಿದೆ.ಆಸ್ಪತ್ರೆಯ ಲ್ಲಿರುವ 32 ಗ್ರೂಪ್ ಡಿ. ಹುದ್ದೆಯಲ್ಲಿ ಕೇವಲ 2 ಹುದ್ದೆಗಳು ಭರ್ತಿ ಇವೆ. 13 ಗ್ರುಪ್ ಡಿ., 9 ನಾನ್ ಕ್ಲಿನಿಕಲ್ ಸ್ಟಾಫ್ ಸೇರಿ 22 ನೌಕರರು ಹೊರ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ವಸತಿ ಗೃಹ : ವೈದ್ಯರಿಗೆ ಹಾಗೂ ಸಿಬ್ಬಂದಿಗೆ ಆಸ್ಪತ್ರೆ ಆವರಣದಲ್ಲಿ ನಿರ್ವಿುಸಿದ್ದ 10 ವಸತಿ ಗೃಹಗಳಲ್ಲಿ 5 ಸಂಪೂರ್ಣ ಶಿಥಿಲಗೊಂಡಿವೆ. ಉಳಿದ 5ರಲ್ಲಿ ಒಂದನ್ನು ಟಿಎಚ್​ಒ ಕಚೇರಿಯನ್ನಾಗಿ ಬಳಕೆ ಮಾಡಲಾಗುತ್ತಿದೆ.

ಘೊಷಣೆಯಾಗಿ ಉಳಿದ ಆಸ್ಪತ್ರೆ

ಬಸವರಾಜ ಬೊಮ್ಮಾಯಿ ಅವರು ಮುಖ್ಯ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಬಜೆಟ್​ನಲ್ಲಿ ಸವಣೂರಿಗೆ ಘೊಷಣೆ ಮಾಡಿದ್ದ ವಿಶೇಷ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸರ್ಕಾರದ ಬದಲಾವಣೆ ನಂತರ ಕೇವಲ ಘೊಷಣೆಯಾಗಿ ಉಳಿದಿದೆ. ಈ ಕುರಿತು ಶಾಸಕರು ಹೆಚ್ಚಿನ ಕಾಳಜಿ ವಹಿಸಿದಲ್ಲಿ ಮಾತ್ರ ಆಸ್ಪತ್ರೆ ನಿರ್ವಣವಾಗಲು ಸಾಧ್ಯ.

ಸವಣೂರ ತಾಲೂಕು ಸಾರ್ವ ಜನಿಕ ಆಸ್ಪತ್ರೆಗೆ ಅವಶ್ಯವಾಗಿರುವ ನುರಿತ ತಜ್ಞ ವೈದ್ಯರ ತಂಡ, ಅನುದಾನ ಸೇರಿ ಮೂಲ ಸೌಕರ್ಯವನ್ನು ನೀಡಲು ಮಾಜಿ ಮುಖ್ಯಮಂತ್ರಿ, ಶಾಸಕ ಬಸವರಾಜ ಬೊಮ್ಮಾಯಿ ಅವರು ಮುಂದಾಗಿ ಆಸ್ಪತ್ರೆಯನ್ನು ಅಭಿವೃದ್ಧಿಗೊಳಿಸಿ ದ್ದಾರೆ. ಆದರೆ, ಕೆಲ ರಾಜಕೀಯ ನಾಯಕರ ವೈಯಕ್ತಿಕ ಹಿತಾಸಕ್ತಿಗಾಗಿ ವೈದ್ಯರ ಮೇಲೆ ಸುಳ್ಳು ಆರೋಪ ಮಾಡುತ್ತಿರುವದು ಸರಿಯಲ್ಲ. | ಗಂಗಾಧರ ಬಾಣದ ಬಿಜೆಪಿ ಮಂಡಳ ಅಧ್ಯಕ್ಷ ತಾಲೂಕು ಸಾರ್ವ ಜನಿಕ ಆಸ್ಪತ್ರೆಯಲ್ಲಿ ಜನರ ನಿರೀಕ್ಷೆಗೆ ತಕ್ಕಂತೆ ಕಾರ್ಯ ಮಾಡಲಾಗುತ್ತಿದೆ. ಸರ್ಕಾರ ಹಾಗೂ ಮೇಲಧಿಕಾರಿಗಳ ಮಾರ್ಗದರ್ಶನದಲ್ಲಿ ಉತ್ತಮ ಆಡಳಿತ ಮತ್ತು ನಿರ್ವಹಣೆ ಇದೆ. | ಡಾ. ಶಂಕರಗೌಡ ಹಿರೇಗೌಡ್ರ, ವೈದ್ಯಾಧಿಕಾರಿ ತಾಲೂಕು ಸಾರ್ವಜನಿಕ ಆಸ್ಪತ್ರೆ, ಸವಣೂರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net