

ಸವಣೂರ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಅಡಿ ಬೆಳೆ ವಿಮೆ ಯೋಜನೆ ಅನುಷ್ಠಾನಗೊಳಿಸಲು ಗೋವಿನ ಜೋಳ (ಮಳೆ ಆಶ್ರಿತ) ಮತ್ತು ಶೇಂಗಾ (ಮಳೆ ಆಶ್ರಿತ) ಬೆಳೆಗಳನ್ನು ಗ್ರಾಮ ಪಂಚಾಯಿತಿ ಮಟ್ಟಕ್ಕೆ ಹಾಗೂ ಉಳಿದ ಬೆಳೆಗಳನ್ನು ಹೋಬಳಿ ಮಟ್ಟದಲ್ಲಿ ಅನುಷ್ಠಾನಗೊಳಿಸಲು ವಿಮೆ ಕಂತು ತುಂಬಲು ಅವಕಾಶ ಕಲ್ಪಿಸಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕಿ ಸವಿತಾ ಚಕ್ರಸಾಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಳೆದ ವರ್ಷದ ಮುಂಗಾರಿಗೆ ಹೋಲಿಸಿದರೆ ಈ ಬಾರಿ ಬಿತ್ತನೆ ಕಾರ್ಯಕ್ಕೆ ಹಿನ್ನಡೆಯಾದರೂ ಈಗ ಮಳೆ ಉತ್ತಮವಾಗಿದ್ದರಿಂದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ಗೋವಿನ ಜೋಳ, ನವಣೆ, ಸಜ್ಜೆ, ಹೆಸರು, ಆಲಸಂದಿ, ಉದ್ದು, ಶೇಂಗಾ, ಸೋಯಾಬೀನ್ ಮತ್ತು ಹತ್ತಿ ಬೆಳೆಯಲು ಮುಂದಾಗಿದ್ದಾರೆ.
ಅತಿ ತೇವದ ಬಾಧೆ ಕಂಡು ಬಂದಲ್ಲಿ ಎಡೆ ಹೊಡೆದು ನೀರು ಬಸಿಯಲು ಅವಕಾಶ ಮಾಡಬೇಕು. ಪ್ರತಿ ಎಕರೆಗೆ ಕನಿಷ್ಠ 2 ಚೀಲ ಜಿಪ್ಸಂ, 4 ಕೆಜಿ ಜಿಂಕ್, 1 ಕೆಜಿ ಬೋರಾನ್ ಅನ್ನು ಬೆಳೆಯ ಸಾಲುಗಳಿಗುಂಟ ಕೊಟ್ಟು ಹಂತ ಹಂತವಾಗಿ ಬೋದು ಏರಿಸಬೇಕು. ಸಸಿಗಳು ಸಂಖ್ಯೆ ಕಡಿಮೆ ಇದೆ. ಅತಿ ಕಡಿಮೆ ಇರುವಲ್ಲಿ ಮರು ಬಿತ್ತನೆ ಮಾಡಬಹುದು, 13:0:45 40 ಗ್ರಾಂ, 19:19:19 40 ಗ್ರಾಂ ಲಘು ಪೋಷಕಾಂಶ ಮಿಶ್ರಣ 30 ಗ್ರಾಂ, ಪ್ರತಿ 15 ಲೀ ಕ್ಯಾನ್‌ಗೆ ಬೆರೆಸಿ ಸಿಂಪಡಿಬೇಕು. ಒಂದು ಎಕರೆಗೆ 12-15 ಕ್ಯಾನ್ ದ್ರಾವಣವನ್ನು ಉಪಯೋಗಿಸಬೇಕು. ಸಿಂಪರಣೆ ಮಾಡುವಾಗ ಮಣ್ಣಿನಲ್ಲಿ ತೇವಾಂಶ ಇರಬೇಕು. ಪೋಷಕಾಂಶ ಸಿಂಪರಣೆಯನ್ನು ಪ್ರತಿ 12-15 ದಿನಗಳಿಗೊಮ್ಮೆ ಕೈಗೊಳ್ಳಬೇಕು. ಗೋವಿನ ಜೋಳ ಬೆಳೆಯಲ್ಲಿ ಸೈನಿಕ ಹುಳು ಬಾಧೆ ಕಂಡು ಬಂದಿದ್ದು (ಎಫ್‌ಎಡಬ್ಲುೃ) ಹತೋಟಿಗಾಗಿ ಇಮಾಮೆಕ್ಟಿನ್ ಬೆಂಝೋಯೇಟ್ 0.5 ಗ್ರಾಂ/ಲೀ ಅಥವಾ ಇಮಾಮೇಕ್ಟಿನ್ ಬೆಂಝೋಯೇಟ್, ಥೈಯೋಮೇತಾಕ್ಸಾಮ 0.4 ಗ್ರಾಂ/ಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.