ಸಮರ್ಪಕ ವಿಮೆ ಪರಿಹಾರ ನೀಡಲು ಒತ್ತಾಯ

17-svr strike
Published on

ಸವಣೂರ: ರೈತರ ಬೆಳೆ ಹಾನಿಗೆ ತಕ್ಕಂತೆ ವಿಮಾ ಕಂಪನಿ ಪರಿಹಾರದ ಹಣ ಬಿಡುಗಡೆ ಮಾಡದೇ ರೈತರಿಗೆ ಮೋಸ ಮಾಡಿದೆ ಎಂದು ಆರೋಪಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ನೇತೃತ್ವದಲ್ಲಿ ರೈತರು ತಹಸೀಲ್ದಾರ್ ಕಚೇರಿ ಎದುರು ಎತ್ತು, ಚಕ್ಕಡಿಗಳೊಂದಿಗೆ ಶುಕ್ರವಾರ ಪ್ರತಿಭಟನೆ ನಡೆಸಿದರು.

2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಗೋವಿನಜೋಳ, ಹತ್ತಿ, ಸೋಯಾಬೀನ್ ಸೇರಿ ವಿವಿಧ ಬೆಳೆಗಳಿಗೆ ವಿಮೆ ಕಂತು ಕಟ್ಟಲಾಗಿತ್ತು. 2024ರ ಅಕ್ಟೋಬರ್​ನಲ್ಲಿ ಸುರಿದ ಮಳೆಗೆ ಬೆಳೆ ಸಂಪೂರ್ಣ ಹಾನಿಯಾಗಿದ್ದವು. ಆಗ ರಾಷ್ಟ್ರೀಯ ವಿಪತ್ತು ನಿರ್ವಹಣೆ ಸಮಿತಿ (ಎನ್​ಡಿಆರ್​ಎಫ್) ನಿಯಮಾನುಸಾರ ಶೇ. 25ರಷ್ಟು ಬೆಳೆ ಹಾನಿ ಬಿಡುಗಡೆ ಮಾಡಬೇಕಿತ್ತು. ಆದರೆ, ಈವರೆಗೂ ಯಾವುದೇ ಪರಿಹಾರವನ್ನು ರೈತರ ಖಾತೆಗಳಿಗೆ ಜಮೆ ಮಾಡಲಿಲ್ಲ. 2025ರ ಜ. 15ರಂದು ವಿಮಾ ಕಂಪನಿ ರೈತರ ಖಾತೆಗಳಿಗೆ ಕೇವಲ 200 ರಿಂದ 400 ರೂ.ವರೆಗೆ ಪರಿಹಾರ ಜಮೆ ಮಾಡಿದೆ. ಇದನ್ನು ವಿರೋಧಿಸಿ ರೈತರು ಕಂದಾಯ ಇಲಾಖೆಗೆ ಮುತ್ತಿಗೆ ಹಾಕಿದ್ದೆವು. ಈ ವೇಳೆ ಪ್ರಭಾರ ಉಪವಿಭಾಗಾದಿಕಾರಿ ಮಮತಾ ಹೊಸಗೌಡ್ರ, 2 ದಿನ ಕಾಲಾವಕಾಶ ನೀಡಿ, ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಈತನಕವೂ ರೈತರಿಗೆ ವಿಮೆ ಪರಿಹಾರ ಸಮರ್ಪಕವಾಗಿ ವಿತರಣೆ ಆಗಿಲ್ಲ ಎಂದು ಆರೋಪಿಸಿದರು.

ತಹಸೀಲ್ದಾರ್ ಭರತರಾಜ್ ಕೆ.ಎನ್., ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ. ವಿಜಯಕುಮಾರ ಪ್ರತಿಭಟನಾನಿರತ ರೈತರ ಸಮಸ್ಯೆ ಆಲಿಸಿದರು.

ಚಂದ್ರಣ್ಣ ರಾಮಜ್ಯೋಗಿ, ಫಕೀರೇಶ ಲಮಾಣಿ, ತಾಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ ಚಿಕ್ಕನಗೌಡ್ರ, ಬಸಣ್ಣ ಶ್ಯಾಬಳದ, ನಾಗರಾಜ ಬಳ್ಳಾರಿ, ಸುಭಾಸ ಕೆರಿಕೊಪ್ಪದ, ಶಿವಾನಂದ ಹೊಳೆಮ್ಮನವರ, ರಮೇಶ ಗುಂಡೂರ, ಶಂಕ್ರಪ್ಪ ಬಿಸ್ಟಣ್ಣವರ, ಹನುಮಂತಗೌಡ ಸವಣೂರ, ಮಹ್ಮದಶಫಿ ಹತ್ತಿಮತ್ತೂರ, ನಿಂಗಪ್ಪ ಗಾಂಜಿ, ರೇವಣ್ಣೆಪ್ಪಗೌಡ ಹುಡೇದ, ಸುರೇಶ ಹಟ್ಟಿ ಇತರರು ಇದ್ದರು.

ಕಪ್ಪು ಪಟ್ಟಿಗೆ ಸೇರಿಸಲು ಒತ್ತಾಯ

ರೈತ ಸಂಘದ ಜಿಲ್ಲಾ ಘಟಕ ಪ್ರಧಾನ ಕಾರ್ಯದರ್ಶಿ ರಮೇಶ ದೊಡ್ಡೂರ ಮಾತನಾಡಿ, ರೈತರನ್ನು ಒಳಗೊಂಡು ಕಂದಾಯ, ಕೃಷಿ, ತೋಟಗಾರಿಕೆ, ವಿಮಾ ಕಂಪನಿ ಹಾಗೂ ಮಾಧ್ಯಮ ಪ್ರತಿನಿಧಿಗಳ ಸಮ್ಮುಖದಲ್ಲಿ ಸಭೆ ನಡೆಸಬೇಕು. ಬೆಳೆ ಹಾನಿಗೆ ತಕ್ಕಂತೆ ಪರಿಹಾರ ಹಣ ಜಮೆ ಮಾಡಲು ಎಸಿ ಕ್ರಮ ಕೈಗೊಳ್ಳಬೇಕು. ಮೋಸ ಮಾಡುತ್ತಿರುವ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಲು ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಎಚ್ಚರಿಕೆ ನೀಡಿ ಪ್ರತಿಭಟನೆ ಹಿಂಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net