

ಸವಣೂರ: ಕಠಿಣ ಪರಿಶ್ರಮದಿಂದ ಮಾತ್ರ ಉನ್ನತ ಸಾಧನೆ ಸಾಧ್ಯ. ಶಿಕ್ಷಣ ಹಾಗೂ ಸಂಸ್ಕಾರ ಪಡೆದಲ್ಲಿ ಉತ್ತಮ ರಾಷ್ಟ್ರ ನಿರ್ಮಾಣಕ್ಕೆ ಕೊಡಗೆ ನೀಡಲು ಸಾಧ್ಯವಾಲಿದೆ ಎಂದು ಯುವ ವೈದ್ಯ ಡಾ. ಅನೂಪ ರಾಯ್ಕರ್ ತಿಳಿಸಿದರು.
ವೈದ್ಯರ ದಿನಾಚರಣೆ ಅಂಗವಾಗಿ ಪಟ್ಟಣದ ಹಾವಣಗಿ ಪ್ಲಾಟ್‌ನಲ್ಲಿರುವ ಶಂಶಾಕ ಕ್ಲಿನಿಕ್‌ನಲ್ಲಿ ಶನಿವಾರ ಜೆಸಿಐ ನಮ್ಮ ಸವಣೂರು ಘಟಕದ ವತಿಯಿಂದ ಏರ್ಪಡಿಸಿದ್ದ ವೈದ್ಯರಿಗೊಂದು ಸಲಾಂ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಯುವ ವೈದ್ಯರಾದ ಡಾ. ಪರಶುರಾಮ ಹೊಳಲ, ಡಾ. ಸುಷ್ಮಾ ಪಾಟೀಲ ಮಾತನಾಡಿ, ಸಾಮಾಜಿಕ ಸೇವೆಯಡಿ ವೈದ್ಯರು ಕಾರ್ಯನಿರ್ವಹಿಸುವುದು ಅವಶ್ಯವಾಗಿದೆ ಎಂದರು.
ಜೆಸಿಐ ನಮ್ಮ ಸವಣೂರು ಅಧ್ಯಕ್ಷ ಬಾಪುಗೌಡ ಕೊಪ್ಪದ ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವ ವೈದ್ಯರಿಗೆ ನಗರ ಪ್ರದೇಶಗಳಲ್ಲಿ ಲಕ್ಷಾಂತರ ರೂಪಾಯಿ ವೇತನ ಹಾಗೂ ಆದಾಯ ಇದ್ದರೂ ಸವಣೂರಿನಲ್ಲಿ ಸೇವೆಗೆ ಮುಂದಾಗಿರುವುದು ಹೆಮ್ಮೆಯ ಸಂಗತಿ ಎಂದರು.
ಜೆಸಿಐ ಪದಾಧಿಕಾರಿಗಳಾದ ಪ್ರಕಾಶ ಜಮಾದಾರ, ರಮೇಶ ಅರಗೋಳ, ಯೋಗೇಂದ್ರ ಜಂಬಗಿ, ಜಿ.ವಿ. ಪಾಟೀಲ, ಶೋಭಾ ಪಾಟೀಲ, ಸಂತೋಷ ಗುಡಿಸಾಗರ, ವಿದ್ಯಾಧರ ಕುತನಿ, ಹರೀಶ ಹಿರೆಳ್ಳಿ, ಎಲ್.ಸಿ. ಕುರವತ್ತಿ, ಪ್ರೇಮಾ ಚಳ್ಳಾಳ, ಪುಷ್ಪಾ ಬತ್ತಿ, ತೇಜಸ್ವಿನಿ ಕೊಂಡಿ, ಸುನಂದಾ ಚಿನ್ನಾಪೂರ, ಸರೋಜಾ ರಾಯ್ಕರ್ ಇತರರು ಪಾಲ್ಗೊಂಡಿದ್ದರು. ಕಾರ್ಯದರ್ಶಿ ಬಸವರಾಜ ಚಳ್ಳಾಳ ಕಾರ್ಯಕ್ರಮ ನಿರ್ವಹಿಸಿದರು.