ಸಂತ್ರಸ್ತರ ಸಮಸ್ಯೆ ಆಲಿಸಿದ ಸವಣೂರ ಉಪವಿಭಾಗಾಧಿಕಾರಿ

Savanur sub-divisional officer heard the problem of the victims
Published on

ಬಂಕಾಪುರ: ಭಾರಿ ಮಳೆಗೆ ಜಲಾವೃತಗೊಂಡಿದ್ದ ಸಾಯಿನಗರಕ್ಕೆ ಸವಣೂರ ಉಪವಿಭಾಗಾಧಿಕಾರಿ ಮಹಮ್ಮದ್ ಖಿಜರ್ ಶನಿವಾರ ಭೇಟಿ ನೀಡಿ, ಸಂತ್ರಸ್ತರ ಸಮಸ್ಯೆ ಆಲಿಸಿದರು.

ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಗೆ ಸಾಯಿ ನಗರದ ತಗ್ಗು ಪ್ರದೇಶದ ಕೆಲ ಮನೆಗಳು ಜಲಾವೃತಗೊಂಡಿದ್ದವು. ಮನೆಯಲ್ಲಿನ ನಿವಾಸಿಗಳು ಸ್ಥಳೀಯರ ಸಹಾಯದಿಂದ ಸುರಕ್ಷಿತ ಸ್ಥಳಕ್ಕೆ ತೆರಳಿದ್ದರು. ಬೆಳಗ್ಗೆ ಸಮಸ್ಯೆ ಕುರಿತು ಪುರಸಭೆಗೆ ಮಾಹಿತಿ ನೀಡಿದ್ದರು. ಆದರೆ, ರಜೆ ಇರುವ ಕಾರಣಕ್ಕೆ ಮುಖ್ಯಾಧಿಕಾರಿ ಸಮಸ್ಯೆಗೆ ಸ್ಪಂದಿಸದ ಕಾರಣ ಸ್ಥಳೀಯರು ಉಪವಿಭಾಗಾಧಿಕಾರಿ ಗಮನಕ್ಕೆ ತಂದಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಉಪವಿಭಾಗಾಧಿಕಾರಿ ಮಹಮ್ಮದ ಖಿಜರ್ ಪುರಸಭೆಯಿಂದ ಜೆಸಿಬಿ ತರಿಸಿ, ಮೂವರು ಪೌರಕಾರ್ವಿುಕರೊಂದಿಗೆ ತಾವು ನೀರಿಗಿಳಿದು ತಗ್ಗು ಪ್ರದೇಶದಲ್ಲಿ ಜಮೆಯಾಗಿದ್ದ ನೀರನ್ನು ಹೊರ ಹಾಕಿಸಿದರು.

ಪ್ರತಿ ಸಲ ಮಳೆ ಬಂದಾಗ ಇಲ್ಲಿ ಇದೇ ಸಮಸ್ಯೆಯಾಗುತ್ತಿದೆ. ಕೂಡಲೇ ಸಾಯಿನಗರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕ್ರಿಯಾಯೋಜನೆ ತಯಾರಿಸುವಂತೆ ಪುರಸಭೆ ಇಂಜಿನಿಯರ್ ಮಾಲತೇಶ ಅಗಡಿಗೆ ಉಪವಿಭಾಗಾಧಿಕಾರಿ ಸೂಚನೆ ನೀಡಿದರು.

ಅಳಲು ತೋಡಿಕೊಂಡ ನಿವಾಸಿಗಳು: ಪಟ್ಟಣದ ಹೌಸಿಂಗ್ ಬೋರ್ಡ್ ಕಾಲನಿಯ ಸಾಯಿನಗರ ಪುರಸಭೆಗೆ ಹಸ್ತಾಂತರವಾಗಿ 10 ವರ್ಷ ಕಳೆದಿವೆ. ಆದರೂ, ಇಲ್ಲಿ ಮೂಲಸೌಲಭ್ಯ ಕಲ್ಪಿಸಿಲ್ಲ. ಕೇವಲ ತೆರಿಗೆ ವಸೂಲಿಗೆ ಬರುವ ಪುರಸಭೆ ಸಿಬ್ಬಂದಿ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಲಕ್ಷಾಂತರ ರೂಪಾಯಿ ತೆರಿಗೆ ಕಟ್ಟುತ್ತಿರುವ ಸಾಯಿ ನಗರದ ನಿವಾಸಿಗಳಿಗೆ ಕನಿಷ್ಠ ಸರಿಯಾದ ರಸ್ತೆ ಕಲ್ಪಿಸಿಲ್ಲ. ತೆರಿಗೆ ವ್ಯಾಪ್ತಿಗೆ ಬಾರದ ಪಟ್ಟಣದ ಕೆಲ ಬಡಾವಣೆಗಳಿಗೆ ರಸ್ತೆ, ಚರಂಡಿ, ನೀರು ಸೇರಿದಂತೆ ಎಲ್ಲ ಮೂಲಸೌಲಭ್ಯ ಒದಗಿಸಿದ್ದಾರೆ. ಆದರೆ, ಸಾಯಿನಗರದತ್ತ ಗಮನಹರಿಸಿಲ್ಲ ಎಂದು ಸ್ಥಳೀಯರು ಉಪವಿಭಾಗಾಧಿಕಾರಿಗಳ ಮುಂದೆ ತಮ್ಮ ಅಳಲನ್ನು ತೋಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net