ಅನುದಾನ ಮಾಹಿತಿ ಇಲ್ಲದ್ದಕ್ಕೆ ಶಾಸಕ ಗರಂ

24-SVR-1
Published on

ಸವಣೂರ: ಇಲ್ಲಿನ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಮಂಗಳವಾರ ಕೆಡಿಪಿ ಸಭೆ ಜರುಗಿತು.

ತಾಲೂಕಿನಲ್ಲಿ ವೈದ್ಯರ ಕೊರತೆ ಇದೆ. ಹೀಗಾಗಿ, ಖಾಲಿ ಇರುವ ಪಿಎಚ್‌ಸಿಯಲ್ಲಿ ಸೇವೆ ಸಲ್ಲಿಸಲು ಹೋಗಬಹುದು ಎಂದು ಟಿಎಚ್‌ಒ ಡಾ. ಚಂದ್ರಕಲಾ ಜೆ., ಅವರಿಗೆ ಶಾಸಕ ಯಾಸೀರಖಾನ್ ಪಠಾಣ ತರಾಟೆಗೆ ತೆಗೆದುಕೊಂಡರು.

ಆರೋಗ್ಯ ಇಲಾಖೆಯಡಿ ಅಭಿವೃದ್ಧಿಗಾಗಿ ಸರ್ಕಾರದಿಂದ ಮಂಜೂರಾದ ಅನುದಾನ ಕುರಿತ ಮಾಹಿತಿ ಇಲ್ಲ ಎಂದಿದ್ದಕ್ಕೆ ಶಾಸಕರು ಗರಂ ಆದರು.

ಹುರಳಿಕುಪ್ಪಿ ಆಸ್ಪತ್ರೆಗೆ ವೈದ್ಯಾಧಿಕಾರಿ, ಸಿಬ್ಬಂದಿ ನೇಮಕ ಹಾಗೂ ತವರಮೆಳ್ಳಿಹಳ್ಳಿ ಆಸ್ಪತ್ರೆಗೆ ಮಂಜೂರಾದ 4 ಕೋಟಿ ರೂ. ಅನುದಾನ ಕುರಿತು ಶಾಸಕರ ಪ್ರಶ್ನೆಗೆ ಉತ್ತರ ನೀಡಲು ಟಿಎಚ್‌ಒ ತಡಬಡಾಯಿಸಿದರು.

ಸಭೆಗೆ ಸಮಗ್ರ ಮಾಹಿತಿಯೊಂದಿಗೆ ಬರಬೇಕು. ಶಿಸ್ತುಬದ್ಧವಾಗಿ ಕಾರ್ಯನಿರ್ವಹಿಸಬೇಕು. ಮುಂದಿನ ದಿನಗಳಲ್ಲಿ ಅಶಿಸ್ತು ಸಹಿಸಲ್ಲ. ಹುರಳಿಕುಪ್ಪಿ ಹಾಗೂ ತವರಮೆಳ್ಳಿಹಳ್ಳಿ ಆಸ್ಪತ್ರೆ ಅಭಿವೃದ್ಧಿಗಾಗಿ ವಿಶೇಷ ಕಾಳಜಿ ವಹಿಸಲಾಗಿದೆ. ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಶಾಸಕರು ಎಚ್ಚರಿಸಿದರು.

ಎಪಿಎಂಸಿ ಅಭಿವೃದ್ಧಿಗೆ ಸರ್ಕಾರ ನೀಡಿದ್ದ 5 ಕೋಟಿ ರೂ. ಅನುದಾನ ಮರಳಿ ಹೋಗಲು ಕಾರಣವಾಗಿರುವ ಅಧಿಕಾರಿಯನ್ನು ಅಮಾನತುಗೊಳಿಸಬೇಕು. ಮರಳಿ ಹೋಗಿದ್ದ ಅನುದಾನವನ್ನು ಜಿಲ್ಲಾ ಉಸ್ತುವಾರಿ ಮಂತ್ರಿಗಳ ಬಳಿ ಕೋರಿಕೆ ಸಲ್ಲಿಸಿ ಮತ್ತೆ ಮಂಜೂರಾತಿ ನೀಡಲಾಗಿದೆ. ಎಪಿಎಂಸಿಯಲ್ಲಿ ಸವಣೂರ ವೀಳ್ಯದೆಲೆ ಮಾರುಕಟ್ಟೆ ನಿರ್ಮಾಣಕ್ಕೆ ಕ್ರಿಯಾಯೋಜನೆ ತಯಾರಿಸಿ ಟೆಂಡರ್ ಕರೆದು ಕಾಮಗಾರಿ ಕೈಗೊಳ್ಳಲು ಮುಂದಾಗಬೇಕು. ತಪ್ಪಿದಲ್ಲಿ ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯ ಆಗಲಿದೆ ಎಂದು ಎಪಿಎಂಸಿ ಕಾರ್ಯದರ್ಶಿ ಪಿ.ಜಿ. ಛದ್ರದಮಠ ಅವರಿಗೆ ಎಚ್ಚರಿಕೆ ನೀಡಿದರು.

ಮಕ್ಕಳಿಗೆ ಶಾಲೆಯಲ್ಲಿ ಬಿಸಿಯೂಟ ವಿತರಣೆಯಲ್ಲಿ ಕಾಳಜಿ ವಹಿಸುವಂತೆ ಬಿಇಒ ಎಂ.ಎ್. ಬಾರ್ಕಿ ಹಾಗೂ ಬಿಆರ್‌ಸಿ ಎಂ.ಎನ್. ಅಡಿವೆಪ್ಪನವರ ಅವರಿಗೆ ಸೂಚಿಸಿದರು.

ಸವಣೂರಿನ ಮೋತಿ ತಲಾಬ್ ಕೆರೆ ಸೌಂದರ್ಯೀಕರಣಕ್ಕೆ 5 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಕೆರೆಯಲ್ಲಿರುವ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಬೇಕು. ಜನನಿಬೀಡ ಪ್ರದೇಶದಲ್ಲಿರುವ ಟಿಸಿಗಳನ್ನು ಕೂಡಲೇ ಸ್ಥಳಾಂತರಿಸಬೇಕು ಎಂದು ಹೆಸ್ಕಾಂ ಎಇಇ ದೇವರಾಜ ಅವರೆಡ್ಡಿ ಅವರಿಗೆ ಸೂಚನೆ ನೀಡಿದರು.

ಕೆಡಿಪಿ ಸಮಿತಿಗೆ ಅಧಿಕಾರೇತರ ನಾಮನಿರ್ದೇಶನ ಸದಸ್ಯರಾಗಿ ಆಯ್ಕೆಯಾದ ಮಂಜುನಾಥ ಮಾಲಿ, ಬಾಷಾಸಾಬ್ ಅಂಗಡಿ, ಪಂಚಪ್ಪ ತೋಳದಕೊಪ್ಪ, ರವಿ ಕರಿಗಾರ ಹಾಗೂ ನವೀನಕುಮಾರ ಬಂಡಿವಡ್ಡರ ಅವರನ್ನು ಸನ್ಮಾನಿಸಲಾಯಿತು.

ತಹಸೀಲ್ದಾರ್ ಭರತಕುಮಾರ ಕೆ.ಎನ್., ತಾಪಂ ಇಒ ಬಿ.ಎಸ್. ಶಿಡೇನೂರ, ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಅಧ್ಯಕ್ಷ ಸುಭಾಸ ಮಜ್ಜಗಿ, ಗುಡ್ಡಪ್ಪ ಜಲದಿ, ನಾಗಪ್ಪ ತಿಪ್ಪಕ್ಕನವರ ಇತರರಿದ್ದರು. ಚಂದ್ರು ಲಮಾಣಿ ನಿರ್ವಹಿಸಿದರು.

ಸಭೆ ಮೊಟಕು:

ಶಿಗ್ಗಾಂವಿಯಲ್ಲಿ ಮಧ್ಯಾಹ್ನ ನಡುಬೀದಿಯಲ್ಲಿ ನಡೆದ ಕೊಲೆ ಘಟನೆಯ ಮಾಹಿತಿ ತಿಳಿದು ಶಾಸಕ ಯಾಸೀರಖಾನ್ ಪಠಾಣ ಸಭೆಯನ್ನು ಮೊಟಕುಗೊಳಿಸಿ ಶಿಗ್ಗಾಂವಿಗೆ ತೆರಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net