ಪಾಕಿಸ್ತಾನ ಕೂಡ ಬಿಜೆಪಿ ಆಡಳಿತ ಬಯಸುತ್ತಿದೆ ! ವಿಜಯ ಸಂಕಲ್ಪ ಯಾತ್ರೆಯಲ್ಲಿ ಸವದಿ ಸಂಚಲನ, ಭರ್ಜರಿ ಭಾಷಣಕ್ಕೆ ಕಾರ್ಯಕರ್ತರು ಫಿದಾ....!

WhatsApp Image 2023-03-20 at 7.55.19 PM
Published on

ವಿಜಯಪುರ: ಭಾರತದ ಸಾಂಪ್ರದಾಯಿಕ ಎದುರಾಳಿ, ಶತೃ ರಾಷ್ಟ್ರ ಪಾಕಿಸ್ತಾನ ಕೂಡ ಬಿಜೆಪಿ ಮಾದರಿ ಆಡಳಿತ ಬಯಸುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಹೇಳಿದರು.

ನಾಗಠಾಣದಲ್ಲಿ ಸೋಮವಾರ ಸಂಜೆ ನಡೆದ ಬಿಜೆಪಿ ವಿಜಯಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಪಾಕಿಸ್ತಾನದ ಪ್ರಜೆ ಕೂಡ ಕಮಲದ ಬಾವುಟ ಹಿಡಿದು ತನ್ನ ದೇಶದಲ್ಲಿ ನರೇಂದ್ರ ಮೋದಿ ನೇತೃತ್ವದ ಆಡಳಿತದ ಮಾದರಿ ಪಾಕಿಸ್ತಾನದಲ್ಲೂ ಬರಬೇಕೆಂದು ಕೂಗಿದ್ದು ನೋಡಿದರೆ ನರೇಂದ್ರ ಮೋದಿ ಅವರ ತಾಕತ್ತು ಎಂಥದ್ದು ಎಂಬುದು ಅರಿವಿಗೆ ಬರಲಿದೆ ಎಂದರು.

ಒಂದು ಕಾಲದಲ್ಲಿ ಭಾರತವನ್ನು ಬಡವರ ದೇಶ, ಹಾವಾಡಿಗರ ದೇಶ, ಭಿಕ್ಷುಕರ ದೇಶ ಎಂದು ಕರೆಯುತ್ತಿದ್ದರು. ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ಬಡದೇಶ ಎಂದು ಕರೆಯುವ ಹಿರಿಯ ರಾಷ್ಟ್ರಗಳೇ ಭಾರತದ ಸಹಾಯ ಕೇಳುವ ಸ್ಥಿತಿ ನಿರ್ಮಾಣವಾಗಿದೆ. ಭಾರತ ಇಂದು ಶಕ್ತಿಶಾಲಿ ರಾಷ್ಟ್ರವಾಗಿದೆ. ಇಡೀ ಜಗತ್ತು ಭಾರತದತ್ತ ನೋಡುತ್ತಿದೆ. ಜಗತ್ತಿಗೆ ಗುರುವಿನ ಸ್ಥಾನದಲ್ಲಿ ಭಾರತ ಇದೆ. ಅಂತಾರಾಷ್ಟ್ರೀಯ ಮಟ್ಟದ ಸಮಸ್ಯೆಗಳ ಇತ್ಯರ್ಥಕ್ಕೆ ನರೇಂದ್ರ ಮೋದಿ ಅವರ ಸಲಹೆ ಕೇಳುವ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆಲ್ಲ ಕಾರಣರಾದ ಪ್ರಧಾನಿ ನರೇಂದ್ರ ಮೋದಿಯ ಕೈ ಬಲಪಡಿಸಲು ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ತರಲು ಸಂಕಲ್ಪ ಮಾಡಬೇಕೆಂದರು.

ಈಗಾಗಲೇ ರಾಜ್ಯಾದ್ಯಂತ ನಾಲ್ಕು ಹಂತದಲ್ಲಿ ವಿಜಯ ಸಂಕಲ್ಪ ಯಾತ್ರೆ ಕೈಗೊಳ್ಳಲಾಗಿದೆ. ರಾಜ್ಯದೆಲ್ಲೆಡೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಅದೇ ರೀತಿ ನಾಗಠಾಣ ಹಾಗೂ ಇಂಡಿಯಲ್ಲೂ ಸಾಕಷ್ಟು ಬೆಂಬಲ ವ್ಯಕ್ತವಾಗಿದ್ದು, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಈ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ಶತಃ ಸಿದ್ಧ ಎಂದರು.

ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾತನಾಡಿ, ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರಲು ರಾಜ್ಯದ ಜನ ಸಂಕಲ್ಪ ಮಾಡಿಯಾಗಿದೆ. ಕಳೆದ ಬಾರಿ ಮೈ ಮರೆತಿದ್ದರಿಂದ ಕೆಲವೇ ಮತಗಳ ಅಂತರದಿಂದ ನಾಗಠಾಣ ಕ್ಷೇತ್ರದಲ್ಲಿ ಬಿಜೆಪಿಗೆ ಸೋಲಾಗಿದೆ. ಅಂದಿನ ಸೋಲು ನೆನಪಿಟ್ಟುಕೊಂಡು ಎಲ್ಲರೂ ಒಟ್ಟಾಗಿ ಈ ಬಾರಿ ಬಿಜೆಪಿ ಬೆಂಬಲಿಸಬೇಕು. ಆ ಮೂಲಕ ಮತ್ತೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರಬೇಕೆಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ, ಮುಖಂಡರಾದ ಡಾ.ಗೋಪಾಲ ಕಾರಜೋಳ, ಉಮೇಶ ಕಾರಜೋಳ, ಚಂದ್ರಶೇಖರ ಕವಟಗಿ, ನವೀನ ಅರಕೇರಿ ಮತ್ತಿತರರಿದ್ದರು.

ಹೂಮಾಲೆ ಹಾಕಿ, ಪಟಾಕಿ ಸಿಡಿಸಿ ಯಾತ್ರೆಯನ್ನು ಬರಮಾಡಿಕೊಳ್ಳಲಾಯಿತು. ಹಲಗೆ ಮೇಳ, ಡಿಜೆ ಸದ್ದಿಗೆ ಕಾರ್ಯಕರ್ತರು ಭರ್ಜರಿ ಹೆಜ್ಜೆ ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net