

ಬೆಳಗಾವಿ: ರೇಣುಕಾ ಯಲ್ಲಮ್ಮದೇವಿ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸವದತ್ತಿ ಪಟ್ಟಣಕ್ಕೆ ರೈಲು ಸಂಪರ್ಕ ಕಲ್ಪಿಸಲು ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಸರ್ವೇ ಕೈಗೊಳ್ಳುವಂತೆ ಒತ್ತಾಯಿಸಿ ನವದೆಹಲಿಯಲ್ಲಿ ಬುಧವಾರ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಸಂಸದ ಜಗದೀಶ ಶೆಟ್ಟರ್ ಮನವಿ ಸಲ್ಲಿಸಿದರು.
ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಪ್ರತಿ ವರ್ಷ ದೇಶದ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ದರ್ಶನಕ್ಕಾಗಿ ಆಗಮಿಸುತ್ತಾರೆ. ಆದರೆ, ಇಲ್ಲಿ ಆಗಮಿಸಲು ಕೇವಲ ರಸ್ತೆ ಸಂಪರ್ಕ ಮಾತ್ರ ಲಭ್ಯವಿರುವುದರಿಂದ ದೇವಸ್ಥಾನದ ರಸ್ತೆ ಉದ್ದಕ್ಕೂ ವಾಹನಗಳ ಸಂಚಾರ ದಟ್ಟಣೆ ಉಂಟಾಗಿ ಹಲವಾರು ಗಂಟೆಗಳ ಕಾಲ ಭಕ್ತರು ಪರದಾಡುವ ಸ್ಥಿತಿ ಎದುರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸವದತ್ತಿ ಪಟ್ಟಣಕ್ಕೆ ರೈಲು ಸಂಪರ್ಕ ಕಲ್ಪಿಸುವುದು ತುಂಬ ಅವಶ್ಯವಾಗಿದ್ದು, ಈ ಕುರಿತು ನೂತನವಾಗಿ ನಿರ್ಮಾಣ ಮಾಡಬೇಕಾದ ರೈಲು ಮಾರ್ಗದ ಸರ್ವೇ ಕಾರ್ಯ ನಡೆಸಲು ಹುಬ್ಬಳ್ಳಿ ನೈಋತ್ಯ ವಲಯ ರೈಲ್ವೆ ಮಹಾಪ್ರಬಂಧಕರಿಗೆ ನಿರ್ದೇಶನ ನೀಡುವಂತೆ ವಿನಂತಿಸಿದರು. ಕೇಂದ್ರ ರೈಲ್ವೆ ಸಚಿವರು ಬೇಡಿಕೆ ಈಡೇರಿಸುವುದಕ್ಕೆ ಭರವಸೆ ನೀಡಿದ್ದಾರೆ ಎಂದು ಜಗದೀಶ ಶೆಟ್ಟರ್ ತಿಳಿಸಿದ್ದಾರೆ. 2016ರಲ್ಲಿ ಮಹದಾಯಿ ಯೋಜನೆಯ ಅನುಷ್ಠಾನಕ್ಕೆ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ರೈಲು ರೋಖೋ ಕೈಗೊಂಡ ನೂರಾರು ರೈತರ ಮೇಲೆ ದಾಖಲಿಸಿದ ಪ್ರಕರಣ ರದ್ದುಪಡಿಸುವಂತೆಯೂ ವಿನಂತಿಸಿದರು. ಕೇಂದ್ರ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಇದ್ದರು.
ಬೆಳಗಾವಿ ಜಿಲ್ಲೆಯಲ್ಲಿ ಕೃಷಿ ಸಿಂಚಾಯಿ ಯೋಜನೆಯಡಿ ಕಾಮಗಾರಿಗಳ ಪ್ರಾರಂಭಕ್ಕೆ ತಯಾರಿಸಿದ ಸುಮಾರು 122.75 ಕೋಟಿ ರೂ. ಅಂದಾಜು ಮೊತ್ತದ ಪ್ರಸ್ತಾವನೆಗೆ ಅನುಮೋದನೆ ಕೋರಿ ರಾಜ್ಯ ಸರ್ಕಾರವು ಈಗಾಗಲೇ ಕೇಂದ್ರ ಜಲ ಶಕ್ತಿ ಸಚಿವಾಲಯಕ್ಕೆ ಮನವಿ ಕಳುಹಿಸಿದ್ದು, ಅದಕ್ಕೆ ಶೀಘ್ರ ಅನುಮೋದನೆ ಸೂಚಿಸುವಂತೆ ಕೋರಿ ಸಂಸದ ಜಗದೀಶ ಶೆಟ್ಟರ್ ಅವರು, ಕೇಂದ್ರ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು. ಮನವಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಜಗದೀಶ ಶೆಟ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.