ಸೌಜನ್ಯ ಹತ್ಯೆ ಪ್ರಕರಣ : ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಮೈಸೂರಿನಲ್ಲಿ ಪ್ರತಿಭಟನೆ

Saujanya murder case Protest in Mysore demanding arrest of accused
Published on

ಮೈಸೂರು: ಸೌಜನ್ಯ ಕೊಲೆ ಪ್ರಕರಣದ ನೈಜ ಆರೋಪಿಗಳನ್ನು ಬಂಧಿಸಬೇಕು ಹಾಗೂ ಈ ಪ್ರಕರಣದೊಂದಿಗೆ ಧರ್ಮಸ್ಥಳದಲ್ಲಿ ದಾಖಲಾದ ಅಸಹಜ ಸಾವಿನ ಪ್ರಕರಣಗಳ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ ಹಾಗೂ ಸಮಾನ ಮನಸ್ಕ ವೇದಿಕೆ ವತಿಯಿಂದ ಪುರಭವನ ಆವರಣದ ಅಂಬೇಡ್ಕರ್ ಪ್ರತಿಮೆ ಬಳಿ ಗುರುವಾರ ಪ್ರತಿಭಟನೆ ನಡೆಯಿತು.

ಧರ್ಮಸ್ಥಳದಲ್ಲಿ ಸೌಜನ್ಯ ಎಂಬ ಯುವತಿಯ ಮೇಲೆ 2012ರ ಅ.9 ರಂದು ಅತ್ಯಾಚಾರ ನಡೆಸಿ ಹತ್ಯೆ ನಡೆಸಲಾಯಿತು. ಬಳಿಕ ಹಲವು ತನಿಖೆ ನಡೆದರೂ ನೈಜ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗಿಲ್ಲ. ಹೀಗಾಗಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನೈಜ ಆರೋಪಿಗಳನ್ನು ಬಂಧಿಸದ, ಪ್ರಕರಣದ ಸೂಕ್ತ ತನಿಖೆ ನಡೆಸದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದು ಸೂಕ್ತ ಎಂಬ ವಿಶೇಷ ನ್ಯಾಯಾಲಯದ ಆದೇಶವನ್ನು ಸರ್ಕಾರ ಪಾಲಿಸಬೇಕು ಎಂದು ಒತ್ತಾಯಿಸಲಾಯಿತು.

ಸೌಜನ್ಯ ಅತ್ಯಾಚಾರ ಮತ್ತು ಕೊಲೆಯ ನೈಜ ಆರೋಪಿಗಳನ್ನು ಬಂಧಿಸಲು ಸೂಕ್ತ ರೀತಿಯ ಕ್ರಮ, ತನಿಖೆಗೆ ಸರ್ಕಾರ ಆದೇಶಿಸಬೇಕು. ಧರ್ಮಸ್ಥಳ ವ್ಯಾಪ್ತಿಯಲ್ಲಿ ಕಳೆದ 20 ವರ್ಷಗಳಲ್ಲಿ ದಾಖಲಾಗಿರುವ ನೂರಾರು ಅಸಹಜ ಸಾವುಗಳ ತನಿಖೆ ನಡೆಸಬೇಕು ಎಂದು ಆಗ್ರಹಿಸಲಾಯಿತು.

ಧರ್ಮಸ್ಥಳದಲ್ಲಿ ದುಡಿಯುವ ಸ್ವಚ್ಚತಾ ಕಾರ್ಮಿಕರಿಗೆಂದೇ ಅಶೋಕ ನಗರ ದಲಿತ ಕಾಲನಿ ನಿರ್ಮಿಸಲಾಗಿದೆ. ತಲೆತಲಾಂತರಗಳಿಂದ ಅಶೋಕನಗರದಲ್ಲೇ ವಾಸಿಸುತ್ತಿದ್ದರೂ ಇನ್ನೂ ಮನೆಯ ಅಡಿಸ್ಥಳವನ್ನು ದಲಿತರ ಹೆಸರಿಗೆ ಹಕ್ಕು ಪತ್ರ ನೀಡಲಾಗಿಲ್ಲ. ಸ್ವಚ್ಛತಾ ಕಾರ್ಮಿಕರು ಕುಸಿದಿರುವ, ತೂತಾಗಿರುವ ಮನೆಗಳಲ್ಲಿ ಹೀನಾಯ ಸ್ಥಿತಿಯಲ್ಲಿ ವಾಸಿಸುತ್ತಿದ್ದಾರೆ. ಸ್ವಚ್ಛತಾ ಕಾರ್ಮಿಕರಿಗೆ ಕಾರ್ಮಿಕ ಕಾಯ್ದೆಯಂತೆ ಸಂಬಳ ನೀಡಲಾಗುತ್ತಿದೆಯೇ ಎಂಬುದನ್ನು ಖಾತರಿಪಡಿಸಬೇಕು. ಧರ್ಮಸ್ಥಳ ಅಶೋಕನಗರದ 128 ದಲಿತ ಕುಟುಂಬಗಳು, ಮುಂಡುಪಾಡಿಯ 42 ದಲಿತ ಕುಟುಂಬಗಳು ಮತ್ತು ಗ್ರಾಮದ ಇತರ ದಲಿತ ಕುಟುಂಬಗಳಿಗೆ ತಲಾ ಒಂದು ಎಕರೆ ಸರ್ಕಾರಿ ಭೂಮಿಯನ್ನು ಸರ್ಕಾರ ಕೊಡಿಸಬೇಕು. ಗ್ರಾಮೀಣಾಭಿವೃದ್ಧಿ ಯೋಜನೆಯ ಹೆಸರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ಅಪರಾಧ ನಡೆಯುತ್ತಿದ್ದು, ಮೈಕ್ರೋ ಫೈನಾನ್ಸ್ ಹೆಸರಿನಲ್ಲಿ ನೀಡುತ್ತಿರುವ ಕಿರುಕುಳ ತಪ್ಪಿಸಬೇಕು ಎಂದು ಒತ್ತಾಯಿಸಲಾಯಿತು.

ಪ್ರತಿಭಟನೆಯಲ್ಲಿ ರಂಗಕರ್ಮಿ ಬಸವಲಿಂಗಯ್ಯ, ರಂಗಾಯಣ ಮಾಜಿ ನಿರ್ದೇಶಕ ಜನಾರ್ಧನ್, ಪ್ರಮುಖರಾದ ಬೆಟ್ಟಯ್ಯಕೋಟೆ ಕಾಳಚನ್ನೇಗೌಡ, ಒಡನಾಡಿಯ ಪರಶುರಾಮ್, ಹೊಸಕೋಟೆ ಬಸವರಾಜು, ಮರಂಕಯ್ಯ, ಚಂದ್ರಶೇಖರ ಮೇಟಿ ಹಾಗೂ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net