

ಕಾರವಾರ: ತನ್ನ ಹೆಂಡತಿ ಮಕ್ಕಳನ್ನು ಚೆನ್ನಾಗಿ ನೋಡಿಕೊಂಡು ಉತ್ತಮ ಜೀವನ ನಡೆಸಬೇಕೆಂಬ ಆಸೆಯಿಂದ ವಿದೇಶಕ್ಕೆ ಕೆಲಸ ಅರಸಿ ಹೋಗಿದ್ದ ವ್ಯಕ್ತಿಯ ಜೀವನ ಇದೀಗ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ.
ಕಾರವಾರ ಮೂಲದ ಬಾಲಕೃಷ್ಣ ಕೋಟಾಕರ್ ಎಂಬಾತ, ಕಳೆದ ಆಗಸ್ಟ್ನಲ್ಲಿ ಏಜೆನ್ಸಿಗಳ ಸಹಾಯದಿಂದ ಚಾಲಕನ ಕೆಲಸಕ್ಕೆಂದು ಸೌದಿ ಅರೇಬಿಯಾಕ್ಕೆ ತೆರಳಿದ್ದ. ತುಂಬಾ ಕನಸು ಕಟ್ಟಿಕೊಂಡು ಹೋಗಿದ್ದ ಬಾಲಕೃಷ್ಣರಿಗೆ ಆಗಿದ್ದು ಭಾರಿ ನಿರಾಸೆ. ಅದೇನೆಂದರೆ ಚಾಲಕನ ಕೆಲಸ ನೀಡುವ ಬದಲಾಗಿ ಕಸ ಗುಡಿಸುವ ಕೆಲಸ ನೀಡಲಾಗಿದೆ. ಇದನ್ನೂ ಓದಿ: ಅರೆನಗ್ನ ದೇಹದ ಮೇಲೆ ತನ್ನ ಮಕ್ಕಳಿಂದಲೇ ಡ್ರಾಯಿಂಗ್ ಮಾಡಿಸಿಕೊಂಡ ರೆಹನಾ ಫಾತಿಮಾಗೆ ಸಂಕಷ್ಟ!
ಪಾಲಿಗೆ ಬಂದದ್ದು ಅಂದುಕೊಂಡು ಎಲ್ಲವನ್ನು ಸಹಿಸಿಕೊಂಡು ಕೆಲಸ ಮಾಡುತ್ತಿದ್ದ ಬಾಲಾಕೃಷ್ಣಗೆ ಸಮಸ್ಯೆಗಳು ಅಷ್ಟಕ್ಕೆ ಮುಗಿಯಲಿಲ್ಲ. ಕಂಪನಿಯ ಮಾಲೀಕರ ಕಿರುಕುಳ ಹೆಚ್ಚಾಗಿದ್ದು, ಕಳೆದ ಜನವರಿಯಿಂದ ಸರಿಯಾಗಿ ಸಂಬಳ ಹಾಗೂ ಊಟ ನೀಡದೇ ದಿಗ್ಬಂಧನ ವಿಧಿಸಿದ್ದಾರೆಂದು ಬಾಲಾಕೃಷ್ಣ ಅವರು ವಿಡಿಯೋ ಮೂಲಕ ಅಳಲು ತೋಡಿಕೊಂಡಿದ್ದಾರೆ.
ಬಾಲಾಕೃಷ್ಣರನ್ನು ನಂಬಿಕೊಂಡು ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಇದೀಗ ಬಾಲಾಕೃಷ್ಣರ ಪರಿಸ್ಥಿತಿಯನ್ನು ಕಂಡು ಕುಟುಂಬ ಕಂಗಾಲಾಗಿದೆ. ಪತಿಯನ್ನು ಹೇಗಾದರೂ ಮರಳಿ ತವರಿಗೆ ಕರೆಸಿ ಎಂದು ಬಾಲಕೃಷ್ಣರ ಪತ್ನಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: 4 ತಿಂಗಳ ಬಳಿಕ ಕಾಲುವೆಯಲ್ಲಿ ಪತ್ತೆಯಾದ ಕಾರನ್ನು ಹೊರತೆಗೆದ ಪೊಲೀಸರಿಗೆ ಕಾದಿತ್ತು ಶಾಕ್!
ಬಾಲಕೃಷ್ಣ ಅವರು ಈ ಹಿಂದೆಯೂ ಕಾರವಾರದಲ್ಲಿ ಚಾಲಕನ ಕೆಲಸ ಮಾಡಿಕೊಂಡಿದ್ದರು. ವಿದೇಶಕ್ಕೆ ಹೋದ್ರೆ ಜೀವನ ಸುಧಾರಿಸಬಹುದು ಎಂಬ ಆಸೆಯಿಂದ ಸೌದಿಗೆ ಹೋದ ಅವರಿಗೆ ಅಕ್ಷರಶಃ ನರಕ ದರ್ಶನವಾಗಿದೆ. ಇನ್ನೊಂದೆಡೆ ಆತನ ಪಾಸ್ಪೋರ್ಟ್ ದಾಖಲೆಗಳನ್ನು ಕಸಿದಿಟ್ಟುಕೊಂಡಿದ್ದಾರಂತೆ. ಹೀಗಾಗಿ ಸರ್ಕಾರವೂ ಸಹ ಆತನ ನೆರವಿಗೆ ಧಾವಿಸಬೇಕೆಂದು ಸಂಘಟನೆಗಳು ಒತ್ತಾಯಿಸಿವೆ. (ದಿಗ್ವಿಜಯ ನ್ಯೂಸ್)