ಬಿಲ್ಲವ ಅಭ್ಯರ್ಥಿಗಳಿಗೆ ಬೆಂಬಲ - ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್

news_thumbnail_1702572194
Published on



ಮಂಗಳೂರು : ಮುಂದಿನ ಲೋಕಸಭೆ ಚುನಾವಣೆಯಲ್ಲಿ ದ.ಕ., ಉಡುಪಿ- ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಬಿಲ್ಲವ ಅಭ್ಯರ್ಥಿಗಳನ್ನು ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಬೆಂಬಲಿಸಲಿದೆ ಎಂದು ವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ತಿಳಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಲ್ಲವ ಸಮಾಜಕ್ಕೆ ಶಕ್ತಿ ತುಂಬುವ ನಿಟ್ಟಿನಲ್ಲಿ ವೇದಿಕೆಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದರು.
ದ.ಕ., ಉಡುಪಿ, ಚಿಕ್ಕಮಗಳೂರು, ಕಾರವಾರ, ಶಿವಮೊಗ್ಗದಲ್ಲಿ ಸಮಾಜದ 12 ಲಕ್ಷಕ್ಕೂ ಅಧಿಕ ಮತದಾರರಿದ್ದಾರೆ. ಬಿಜೆಪಿಯಿಂದ ಕಳೆದ 33 ವರ್ಷಗಳಿಂದ ಈ ನಾಲ್ಕೂ ಕ್ಷೇತ್ರಗಳಲ್ಲಿ ಸಮಾಜದ ಅಭ್ಯರ್ಥಿಗೆ ಅವಕಾಶ ನೀಡಲಾಗಿಲ್ಲ. ಕಾಂಗ್ರೆಸ್‌ನಲ್ಲಿ 5ನೇ ಬಾರಿ ಜನಾರ್ದನ ಪೂಜಾರಿ ಸೋತ ಬಳಿಕ ಕಳೆದ ಬಾರಿ ದ.ಕ.ದಲ್ಲಿ ಬಂಟ ಸಮುದಾಯದ ಅಭ್ಯರ್ಥಿಗೆ ಅವಕಾಶ ನೀಡಲಾಗಿತ್ತು. ಶ್ರೀ ನಾರಾಯಣ ಗುರು ವಿಚಾರ ವೇದಿಕೆಯ ಹೋರಾಟಗಳ ಪರಿಣಾಮವಾಗಿ ಸಮಾಜಕ್ಕೆ ಬಿಜೆಪಿಯಿಂದ ಉಡುಪಿ- ಚಿಕ್ಕಮಗಳೂರು, ಕಾಂಗ್ರೆಸ್‌ನಿಂದ ಶಿವಮೊಗ್ಗ ಹಾಗೂ ದ.ಕ.ದಲ್ಲಿ ಅವಕಾಶ ನೀಡಲಾಗಿದೆ. ಪಕ್ಷವನ್ನು ಪಕ್ಕಕ್ಕಿಟ್ಟು ಸಮಾಜದ ಅಭ್ಯರ್ಥಿಗಳನ್ನು ಗೆಲ್ಲಿಸುವ
ಪ್ರಯತ್ನ ನಾರಾಯಣ ಗುರು ವಿಚಾರ ವೇದಿಕೆಯಿಂದ ಆಗಲಿದೆ ಎಂದರು.
ನನ್ನನ್ನು ಕಾಂಗ್ರೆಸ್‌ವಾದಿ ಅನ್ನಲಿ, ಜಾತಿವಾದಿ ಎಂದು ಆಪಾದಿಸಲಿ. ಟೀಕೆ, ಟಿಪ್ಪಣಿಗಳಿಗೆ ತಲೆಕೆಡಿಸಿಕೊಳ್ಳದೆ ಸಮಾಜದ ಅಭ್ಯರ್ಥಿಗಳ ಜಯಕ್ಕಾಗಿ ದುಡಿಯಲಿದ್ದೇನೆ. ಕಳೆದ ಎರಡು ತಿಂಗಳಿನಿಂದ ಟೀಂ ಸತ್ಯಜಿತ್ ಸುರತ್ಕಲ್ ಹೆಸರಿನಲ್ಲಿ ಚುನಾವಣೆಗೆ ಅಭಿಯಾನ ನಡೆದಿದೆ. ಟೀಂ ಸತ್ಯಜಿತ್ ಸುರತ್ಕಲ್ ರಾಜಕೀಯ ಉದ್ದೇಶದೊಂದಿಗೆ ಮಾಡಲಾಗಿದ್ದು, ವಿವಿಧ ಸಮಾಜದ ಬಾಂಧವರು ಇರುವುದರಿಂದ ಅದು ಹಾಗೇ ಮುಂದುವರಿಯಲಿದೆ. ಚುನಾವಣೆಯ ನನ್ನ ಕಾರ್ಯಕ್ಕೂ ಆ ತಂಡಕ್ಕೂ ಯಾವುದೇ ಸಂಬಂಧ ಇರುವುದಿಲ್ಲ ಎಂದು ಅವರು ಹೇಳಿದರು.
ವೇದಿಕೆಯ ಎಸ್‌ಎನ್‌ಜಿವಿಯ ಶಿವಮೊಗ್ಗ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಿವು ಹೂಗಾರ್, ಉಪಾಧ್ಯಕ್ಷ ಕೆ.ಪಿ. ಲಿಂಗೇಶ್, ಉಡುಪಿ ತಾಲೂಕು ಅಧ್ಯಕ್ಷ ಶಶಿಧರ ಎಂ. ಅಮೀನ್, ಉಡುಪಿ ಜಿಲ್ಲಾಧ್ಯಕ್ಷ ಜಗನ್ನಾಥ್ ಕೋಟೆ, ಮಂಗಳೂರು ಘಟಕದ ಸಂದೀಪ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net