ಪ್ರತ್ಯೇಕ ಕೋಡ್, ಕಾಲಮ್ ಸೇರಿಸಲು ಒತ್ತಾಯಿಸಿ ಸತ್ಯಾಗ್ರಹ

cnc
Published on

ಮಡಿಕೇರಿ: ರಾಷ್ಟ್ರೀಯ ಜನಗಣತಿಯ ಸಂದರ್ಭ ಆದಿಮಸಂಜಾತ ಬುಡಕಟ್ಟು ಜನಾಂಗ ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಮ್ ಅನ್ನು ಸೇರಿಸಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಮಡಿಕೇರಿಯಲ್ಲಿ ಶಾಂತಿಯುತ ಸತ್ಯಾಗ್ರಹ ನಡೆಸಿತು.

ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸತ್ಯಾಗ್ರಹ ನಡೆಸಿದ ಸದಸ್ಯರು ಕೊಡವ ಯೋಧ ಕುಲಕ್ಕಾಗಿ ಸೋಶಿಯಲ್ ಎಂಜಿನಿಯರಿಂಗ್ ಪ್ರಕ್ರಿಯೆಯ ಭಾಗವಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಮ್ ಅನ್ನು ಸೇರಿಸಬೇಕೆಂದು ಒತ್ತಾಯಿಸಿ ಗೃಹಮಂತ್ರಿಗಳು ಹಾಗೂ ಅವರ ಅಧೀನದಲ್ಲಿ ಬರುವ ರಿಜಿಸ್ಟ್ರಾರ್ ಜನರಲ್ ಮತ್ತು ಸೆನ್ಸಸ್ ಕಮಿಷನರ್ ಆಫ್ ಇಂಡಿಯಾ (ಆರ್‌ಜಿಸಿಸಿಐ) ಇವರಿಗೆ ಜ್ಞಾಪನಾ ಪತ್ರ ಸಲ್ಲಿಸಿದರು.

ಈ ಸಂದರ್ಭ ಮಾತನಾಡಿದ ಎನ್.ಯು.ನಾಚಪ್ಪ, ರಾಷ್ಟ್ರೀಯ ಜನಗಣತಿ ಜೊತೆಗೆ ಜಾತಿವಾರು ಜನಗಣತಿ ನಡೆಸುವ ಬಗ್ಗೆ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಸ್ವಾಗತಾರ್ಹವಾಗಿದೆ. ಜನಗಣತಿಯಲ್ಲಿ ಪ್ರತ್ಯೇಕ ಕೋಡ್ ಮತ್ತು ಕಾಲಮ್ ಕೊಡವ ಸಮುದಾಯದ ನಿಖರವಾದ ಪ್ರಾತಿನಿಧ್ಯವನ್ನು ಖಚಿತಪಡಿಸುತ್ತದೆ. ಸೋಶಿಯಲ್ ಎಂಜಿನಿಯರಿಂಗ್ ಸರ್ಕಾರವು ಸಮುದಾಯದ ನಿರ್ದಿಷ್ಟ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು ಹಾಗೂ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಉದ್ದೇಶಿತ ನೀತಿಗಳನ್ನು ಅಭಿವೃದ್ಧಿಪಡಿಸಲು ಅನುವು ಮಾಡಿಕೊಡುತ್ತದೆ ಎಂದರು.

ಪ್ರತ್ಯೇಕ ಕೋಡ್ ಮತ್ತು ಕಾಲಮ್ ಕೊಡವ ಸಮುದಾಯದ ವಿಶಿಷ್ಟ ಗುರುತು ಹಾಗೂ ಅಸ್ತಿತ್ವವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಏಕ-ಜನಾಂಗೀಯ ಸಮುದಾಯವಾಗಿ ಕೊಡವರು ವಿಶಿಷ್ಟ ಸಾಂಸ್ಕೃತಿಕ ಮತ್ತು ಐತಿಹಾಸಿಕ ಕುರುಹುವನ್ನು ಹೊಂದಿದ್ದು ಅದರ ಗುರುತಿಸುವಿಕೆ ಮತ್ತು ರಕ್ಷಣೆಗೆ ಅರ್ಹವಾಗಿದೆ. ಕೊಡವರ ಯೋಧ ಪರಂಪರೆಯು ಅವರ ಗುರುತಿನ ಅವಿಭಾಜ್ಯ ಅಂಗವಾಗಿದೆ ಮತ್ತು ಜನಗಣತಿಯಲ್ಲಿ ನಿಖರವಾದ ಪ್ರಾತಿನಿಧ್ಯವು ಅವರ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಲು ಸಹಾಯ ಮಾಡುತ್ತದೆ ಎಂದು ಅಭಿಪ್ರಾಯಪಟ್ಟರು.

ಕೊಡವರು ಆರ್ಥಿಕವಾಗಿ, ರಾಜಕೀಯವಾಗಿ, ಸಾಂವಿಧಾನಿಕವಾಗಿ ಮತ್ತು ಎಲ್ಲಾ ವಿಷಯಗಳಲ್ಲಿ ಸಬಲೀಕರಣಗೊಳ್ಳಬೇಕು. ಕೊಡವರ ಚಾರಿತ್ರಿಕ ನಿರಂತರತೆಯನ್ನು ಕಾಪಾಡಿಕೊಳ್ಳಬೇಕು. ಆದ್ದರಿಂದ ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಮ್ ಸೇರಿಸಲು ಸಾಂವಿಧಾನಿಕ ಕಾರ್ಯವಿಧಾನಗಳ ಮೂಲಕ ಅವರ ಸೋಶಿಯಲ್ ಎಂಜಿನಿಯರಿಂಗ್ ಪ್ರಕ್ರಿಯೆಯನ್ನು ಸಕ್ರಿಯಗೊಳಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜ್ಞಾಪನಾ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರಿಗೆ ಸಲ್ಲಿಸಿದರು. ಅರೆಯಡ ಸವಿತಾ, ಚೋಳಪಂಡ ಜ್ಯೋತಿ, ಮುದ್ದಿಯಡ ಲೀಲಾವತಿ, ಕಲಿಯಂಡ ಪ್ರಕಾಶ್, ಆಳಮಂಡ ಜೈ ಗಣಪತಿ, ಪಟ್ಟಮಾಡ ಕುಶ, ಅಜ್ಜಿಕುಟ್ಟಿರ ಲೋಕೇಶ್, ಅರೆಯಡ ಗಿರೀಶ್, ನಂದೇಟಿರ ರವಿ ಸುಬ್ಬಯ್ಯ, ಕಾಟುಮಣಿಯಂಡ ಉಮೇಶ್, ಪುದಿಯೊಕ್ಕಡ ಪೃಥ್ವಿ, ಪುಟ್ಟಿಚಂಡ ದೇವಯ್ಯ, ಮಣೋಟ್ಟಿರ ಚಿಣ್ಣಪ್ಪ, ಬೊಳ್ಳಜಿರ ಬಿ.ಅಯ್ಯಪ್ಪ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net