ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಸತ್ಯದರ್ಶನ ಸಭೆ; ಬೀದಿ ಗುಡಿಸಿ ಮನಗೆದ್ದ ಸ್ವಾಮೀಜಿ

SRI KASA
Published on

ಹುಬ್ಬಳ್ಳಿ: ಸಾವಿರಾರು ಭಕ್ತರು ಊಟ ಸೇವಿಸಿ ತೆರಳಿದ ನಂತರ, ರಸ್ತೆ ಬದಿ ಚೆಲ್ಲಿದ್ದ ಪ್ಲೇಟುಗಳನ್ನು ಸ್ವತಃ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಮತ್ತು ಅವರ ಸಮೀಪವರ್ತಿಗಳು ಗುಡಿಸಿ, ವಿಲೇವಾರಿ ಮಾಡುವ ಮೂಲಕ ಸಾರ್ವಜನಿಕರ ಮನ ಗೆದ್ದರು. ಮಠದ ಶಾಲಾ ಆವರಣದಲ್ಲಿ ಊಟ ನೀಡಲು ಹುಬ್ಬಳ್ಳಿಯ ಭಕ್ತರು ಯೋಜಿಸಿದ್ದರು. ಆದರೆ, ಆವರಣದ ಬಾಗಿಲಿಗೆ ಬೀಗ ಹಾಕಿತ್ತು. ಹೀಗಾಗಿ ಮಠದ ಹೊರಭಾಗದಲ್ಲೇ ಊಟ ವಿತರಿಸಲಾಯಿತು. ಊಟ ಮಾಡಿದವರು ಪೇಪರ್ ಕಪ್, ಪ್ಲೇಟುಗಳನ್ನು ಬೀದಿ ಬದಿಯಲ್ಲೇ ಅಲ್ಲಲ್ಲಿ ಹಾಕಿದ್ದರು. ಮಠದ ಒಳಗೆ ಹೋಗಿ ಗದ್ದುಗೆ ದರ್ಶನ ಪಡೆದು ಹೊರಗೆ ಬಂದ ಸ್ವಾಮೀಜಿ, ಕಸಬರಿಗೆಗಳನ್ನು ತರಿಸಿದರು.

ಪಾದುಕೆಗಳನ್ನು ವಾಹನದಲ್ಲಿ ಬಿಟ್ಟು ಸಾದಾ ಚಪ್ಪಲಿ ಧರಿಸಿಕೊಂಡು ಪ್ರಮುಖ ಭಕ್ತರಾದ ಪ್ರಕಾಶ ಬೆಂಡಿಗೇರಿ, ಶಿವಾನಂದ ಮುತ್ತಣ್ಣವರ, ಇತರರೊಂದಿಗೆ ತಾವೂ ಕಸಬರಿಗೆ ಹಿಡಿದು ಗುಡಿಸಿದರು. ಊಟದ ತ್ಯಾಜ್ಯಗಳನ್ನು ಚೀಲಕ್ಕೆ ತುಂಬಿ, ವ್ಯವಸ್ಥಿತ ವಿಲೇವಾರಿಗೆ ಅನುಕೂಲ ಮಾಡಿಕೊಟ್ಟರು. ಸ್ವಾಮೀಜಿ ಯಾವುದೇ ಬಿಗುಮಾನವಿಲ್ಲದೆ ಸ್ವತಃ ಸ್ವಚ್ಛತಾ ಕಾರ್ಯ ಕೈಗೊಂಡಿದ್ದನ್ನು ನೋಡಿದ ಕೆಲವರು ತಾವೂ ಸಾಥ್ ನೀಡಿದರು. ಸಭೆ ನಂತರ ಸಾರ್ವಜನಿಕರಿಗೆ ತೊಂದರೆಯಾಗದಂತೆ, ಅನೈರ್ಮಲ್ಯಕ್ಕೆ ಕಾರಣವಾಗದಂತೆ ಕಾಳಜಿ ವಹಿಸುವ ಮೂಲಕ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಸ್ಥಳೀಯರ ಮನ ಗೆದ್ದರು.

ರಸ್ತೆಬದಿ ಪ್ರಸಾದ ಸೇವನೆ!

ಒಂದು ಕಾಲದಲ್ಲಿ ಅನ್ನ ದಾಸೋಹಕ್ಕೆ ಹೆಸರುವಾಸಿಯಾಗಿದ್ದ ಮೂರು ಸಾವಿರ ಮಠದಲ್ಲಿ ಭಾನುವಾರ ಸಾವಿರಾರು ಭಕ್ತರು ತಾವೇ ತಂದಿದ್ದ ಪ್ರಸಾದ ಸೇವನೆಗೂ ಅವಕಾಶ ದೊರೆಯದೇ ರಸ್ತೆಬದಿ ಪ್ರಸಾದ ಸ್ವೀಕರಿಸಿದ ಪ್ರಸಂಗ ಜರುಗಿತು. ದಿಂಗಾಲೇಶ್ವರ ಶ್ರೀಗಳ ಸತ್ಯದರ್ಶನ ಸಭೆ ಆಯೋಜಕರು ಭಕ್ತರಿಗಾಗಿ ಪ್ರಸಾದ ತೆಗೆದುಕೊಂಡು ಬಂದಿದ್ದರು. ತಾವು ತಂದಿದ್ದ ಪ್ರಸಾದ ಸೇವನೆಗೂ ಮಠದ ಪದಾಧಿಕಾರಿಗಳು ಅವಕಾಶ ನೀಡಲಿಲ್ಲ.  ಇದರಿಂದಾಗಿ ಭಕ್ತರು ರಸ್ತೆಬದಿಯಲ್ಲೇ ಪ್ರಸಾದ ಸೇವಿಸಬೇಕಾಯಿತು.

ಮೂಜಗಂ ಅವರ ಕಾಲದಲ್ಲಿ ಸಭೆ, ಸಮಾರಂಭ ಸಂದರ್ಭ ಎಷ್ಟೇ ಭಕ್ತರು ಆಗಮಿಸಿದ್ದರೂ ಪ್ರಸಾದ ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ, ಇಂದು ನಾವೇ ತಂದಿರುವ ಪ್ರಸಾದ ಸೇವನೆಗೂ ಮಠದಲ್ಲಿ ಅವಕಾಶ ಸಿಗಲಿಲ್ಲ ಎಂದು ಭಕ್ತರು ಬೇಸರಗೊಂಡರು. ಘಟಪ್ರಭಾದ ಮಲ್ಲಿಕಾರ್ಜುನ ಸ್ವಾಮೀಜಿ ಜತೆ ಬಂದಿದ್ದ ಹಲವು ಭಕ್ತರಿಗೆ ಮಠದಲ್ಲೇ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಕೆಟ್ಟ ಗಡಿಯಾರ ಸರಿಯಾಗಲಿ...

ಮೂರುಸಾವಿರ ಮಠದ ಮೊದಲ ಮುಖ್ಯ ದ್ವಾರದಲ್ಲಿ ಗಡಿಯಾರ ಕೆಟ್ಟು ನಿಂತಿದ್ದು, ಅದು ಶ್ರೀಮಠದ ವಾಸ್ತವತೆ ತೋರುತ್ತಿದೆ. ಕನಿಷ್ಠ ಪಕ್ಷ ಗಡಿಯಾರ ಸರಿಪಡಿಸುವ ಕೆಲಸವೂ ಆಗುತ್ತಿಲ್ಲ. ಅದನ್ನು ಸರಿಪಡಿಸಲು ದಿಂಗಾಲೇಶ್ವರರೇ ಉತ್ತರಾಧಿಕಾರಿಯಾಗಿ ಬರಬೇಕು ಎಂದು ಭಕ್ತರು ಹೇಳಿದ್ದು ಮಾರ್ವಿುಕವಾಗಿತ್ತು.

ಪುತ್ಥಳಿಗಳಿಗೆ ಮಾಲಾರ್ಪಣೆ

‘ಸತ್ಯದರ್ಶನ ಸಭೆ’ ನಿಮಿತ್ತ ದಿಂಗಾಲೇಶ್ವರ ಸ್ವಾಮೀಜಿ ಹಮ್ಮಿಕೊಂಡಿದ್ದ ಪಾದಯಾತ್ರೆಗೆ ಭಕ್ತರ ಭಾರಿ ಸ್ಪಂದನೆ ದೊರೆಯಿತು. ಅಂಬೇಡ್ಕರ್, ಬಸವೇಶ್ವರ, ಸರ್ ಸಿದ್ದಪ್ಪ ಕಂಬಳಿ, ಕಿತ್ತೂರ ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಪುತ್ಥಳಿಗಳಿಗೆ ಶ್ರೀಗಳು ಮಾಲಾರ್ಪಣೆ ಮಾಡಿ, ನೆಹರು ಮೈದಾನ ಬಳಿಯಿಂದ ಹೊರಟ ಮೆರವಣಿಗೆಯಲ್ಲಿ ಹು-ಧಾ ಅವಳಿ ನಗರ, ವಿವಿಧ ಜಿಲ್ಲೆ, ತಾಲೂಕು, ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಪಾಲ್ಗೊಂಡರು. ಉಭಯ ಶ್ರೀಗಳ ಭಾವಚಿತ್ರವಿರುವ ಭಿತ್ತಿ ಪತ್ರ, ಬ್ಯಾನರ್ ಹಿಡಿದ ಭಕ್ತರು, ದಾರಿಯುದ್ದಕ್ಕೂ ಶ್ರೀ ದಿಂಗಲೇಶ್ವರ ಸ್ವಾಮೀಜಿ ಪರ ಜೈಕಾರ ಮೊಳಗಿಸಿದರು. ಮೂಜಗು ಅವರು ದಿಂಗಾಲೇಶ್ವರ ಶ್ರೀಗಳನ್ನು ಮೂರು ಸಾವಿರ ಮಠಕ್ಕೆ ಉತ್ತರಾಧಿಕಾರಿಯನ್ನಾಗಿ ಮಾಡಲೇಬೇಕು. ಕೊಟ್ಟ ಮಾತಿನಂತೆಯೇ ನಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ತೆರೆಮರೆಯಲ್ಲೇ ಮೂಜಗು ವೀಕ್ಷಣೆ

ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಬೆಳಗ್ಗೆ ಒಂದು ಬಾರಿ ಕೋಣೆಯಿಂದ ಹೊರಬಂದು ಭದ್ರತೆ ಪರಿಶೀಲಿಸಿ ವಾಪಸಾದರು. ಬಳಿಕ ಮಹಡಿಯಿಂದಲೇ ಮಠದ ಆವರಣದಲ್ಲಿ ನಡೆಯುತ್ತಿದ್ದ ಚಲನವಲನ ಹಾಗೂ ವಿದ್ಯಮಾನಗಳನ್ನು ವೀಕ್ಷಿಸಿದರು. ಯಾವೊಬ್ಬ ಭಕ್ತರನ್ನೂ ಭೇಟಿ ಮಾಡದೆ ಕೋಣೆಯಲ್ಲಿ ಇದ್ದರು.

ಮೂರು ಸಾವಿರ ಮಠ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಅರವಿಂದ ಕುಬಸದ, ಹನುಮಂತ ಶಿಗ್ಗಾಂವ, ಅಜ್ಜಪ್ಪ ಬೆಂಡಿಗೇರಿ, ಮಲ್ಲಿಕಾರ್ಜುನ ಕಳಸದ, ಮೋಹನ ಅಸುಂಡಿ, ಲಿಂಗರಾಜ ಪಾಟೀಲ, ವಿಜಯ ಶೆಟ್ಟರ್, ದಾಸೋಹ ಸಮಿತಿಯ ವೀರೇಶ ಸಂಗಳದ, ಪಾಲಿಕೆ ಮಾಜಿ ಸದಸ್ಯ ಶಿವು ಮೆಣಸಿನಕಾಯಿ, ಪ್ರಭು ನವಲಗುಂದಮಠ, ಅಮರೇಶ ಹಿಪ್ಪರಗಿ ಮತ್ತಿತರರು ಮಠದ ಆವರಣದಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net