

ತುಮಕೂರು: ಜಿಲ್ಲೆಯಲ್ಲಿ ಕರೊನಾ ಮಹಾಸ್ಫೋಟವಾಗಿದೆ. ಶನಿವಾರ ಬರೋಬ್ಬರಿ 119 ಜನರಲ್ಲಿ ಸೋಂಕು ದೃಢವಾಗಿದ್ದು, ನಾಲ್ವರು ಬಲಿಯಾಗಿರುವುದು ಭವಿಷ್ಯದ ದಿನಗಳ ಬಗ್ಗೆ ಆತಂಕ ಮೂಡಿಸಿದೆ.
ತುಮಕೂರು ತಾಲೂಕು ಗೆದ್ದಲಹಳ್ಳಿಯ 40 ವರ್ಷದ ಮಹಿಳೆ, ಸದಾಶಿವನಗರದ 52 ವರ್ಷದ ಪುರುಷ, ಸಾದಘಟ್ಟದ 73 ವರ್ಷದ ವ್ಯಕ್ತಿ, ಪೂರ್‌ಹೌಸ್ ಕಾಲನಿಯ 65 ವರ್ಷದ ಪುರುಷನನ್ನು ಸೋಂಕು ಬಲಿತೆಗೆದುಕೊಂಡಿದೆ. 43 ಜನರು ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗಿರುವುದಷ್ಟೇ ತುಸು ಸಮಾಧಾನ.
ಶನಿವಾರ ಪತ್ತೆಯಾದ 119 ಜನರಲ್ಲಿ ಮೂವರು ಗರ್ಭಿಣಿಯರು, ರೋಗ ಲಕ್ಷಣದ 44, ರೋಗ ಲಕ್ಷಣವಿಲ್ಲದ 69, ಪ್ರಾಥಮಿಕ ಸಂಪರ್ಕದಿಂದ 26, ಒಬ್ಬ ಪೊಲೀಸ್ ಸಿಬ್ಬಂದಿ ಸೇರಿದ್ದಾರೆ. ಇದರಲ್ಲಿ 69 ಪುರುಷರು, 50 ಮಹಿಳೆಯರು, 6 ಮಕ್ಕಳು ಹಾಗೂ 60 ವರ್ಷ ಮೇಲ್ಪಟ್ಟ 10 ಜನರಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ ಒಟ್ಟು 1110 ಜನರಲ್ಲಿ ಸೋಂಕು ಪತ್ತೆಯಾದಂತಾಗಿದ್ದು, 473 ಸಕ್ರಿಯ ಪ್ರಕರಣಗಳಿವೆ, ಇದರಲ್ಲಿ ಶನಿವಾರ ಪತ್ತೆಯಾಗಿರುವ 119 ಒಂದು ದಿನದಲ್ಲಿ ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರಕರಣಗಳಾಗಿವೆ.
ಒಂದೇ ಕುಟುಂಬದ 11 ಮಂದಿಗೆ ಪಾಸಿಟಿವ್: ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರಿನ ಒಂದೇ ಕುಟುಂಬದ 11 ಜನರಿಗೆ ಶನಿವಾರ ಸೋಂಕು ದೃಢವಾಗಿದೆ. ಬೆಂಗಳೂರು ಪಾದರಾಯನಪುರ ಮೂಲದಿಂದ ಈ ಕುಟುಂಬಕ್ಕೆ ಸೋಂಕು ತಗುಲಿದ್ದು, ವೃದ್ಧ ಸೋಂಕು ತಗುಲಿ ಮೃತಪಟ್ಟಿದ್ದರು. ಹೀಗಾಗಿ ಕುಟುಂಬದ 20ಕ್ಕೂ ಹೆಚ್ಚು ಸದಸ್ಯರ ಗಂಟಲು ದ್ರವದ ಪರೀಕ್ಷೆ ನಡೆಸಲಾಗಿದ್ದು 2 ವರ್ಷದ ಮಗು, 5, 6 ವರ್ಷದ ಬಾಲಕಿಯರು ಸೇರಿ ಒಟ್ಟು 11 ಮಂದಿಗೆ ಸೋಂಕು ದೃಢವಾಗಿದೆ. ಇವರ ಮನೆ ಇರುವ ಬೀದಿ ಸೀಲ್‌ಡೌನ್ ಮಾಡಲಾಗಿದೆ.
ಸೂಗೂರು ಮತಿಘಟ್ಟ ತಿಪಟೂರು ತಾಲೂಕು! : ತಿಪಟೂರು ತಾಲೂಕು ಸೂಗೂರು ಮತಿಘಟ್ಟದಲ್ಲಿ ಪಾಸಿಟಿವ್ ದಾಖಲಾಗಿದ್ದು, ಶನಿವಾರ ಕೂಡ ಇಬ್ಬರಿಗೆ ಸೋಂಕು ದೃಢವಾಗಿದೆ. ಆದರೆ, ಆರೋಗ್ಯ ಇಲಾಖೆ ಮಾಹಿತಿಯಲ್ಲಿ ಮತಿಘಟ್ಟ ಗ್ರಾಮ ಚಿಕ್ಕನಾಯಕನಹಳ್ಳಿ ತಾಲೂಕು ಎಂದು ಪದೇಪದೆ ಎಡವಟ್ಟು ಮಾಡುತ್ತಿರುವುದು ಜನರಲ್ಲಿ ಗೊಂದಲ ಮೂಡಿಸಿದೆ. ಇದೇ ರೀತಿ ಆಶ್ರಿಹಾಳ್ ಗ್ರಾಮದ ಬದಲಾಗಿ ಹೆಸರಹಳ್ಳಿ ಎಂದು ಹಿಂದೊಮ್ಮೆ ತಪ್ಪು ಮಾಹಿತಿ ಬಿಡುಗಡೆ ಮಾಡಿದ್ದರು.