

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಂಸ್ಕಾರದಿಂದ ಮನುಷ್ಯನು ಉತ್ತಮನಾಗುತ್ತಾನೆ. ಅದಕ್ಕಾಗಿ ಗುರುವಿನ ಆಶ್ರಯ ಬೇಕು. ಕೆಲವೊಮ್ಮೆ ಶ್ರೇಷ್ಠ ಪುಸ್ತಕ ಗುರುವಿನ ಸ್ಥಾನ ಪಡೆಯತ್ತದೆ. ಗ್ರಾಮೀಣ ಪ್ರದೇಶದಲ್ಲಿದ್ದರೂ ಪೀಳಿಗೆಯಿಂದ ಪೀಳಿಗೆಗೆ ಸಂಸ್ಕಾರ ನೀಡುವ ಕೆಲಸವನ್ನು ಹತ್ತಾರು ಪುಸ್ತಕ ರಚಿಸುವ ಮೂಲಕ ಡಾ. ಕೆ. ಗಣಪತಿ ಭಟ್ಟ ಮಾಡುತ್ತಿರುವುದು ಅಭಿನಂದನೀಯ ಎಂದು ಸಂಘಟಕ ಸುಧೀಂದ್ರ ದೇಶಪಾಂಡೆ ಅಭಿಪ್ರಾಯಪಟ್ಟರು.
ಗುರು ಪೂರ್ಣಿಮೆ ನಿಮಿತ್ತ ಧಾರವಾಡ ತಾಲೂಕು ಬ್ರಾಹ್ಮಣ ಸಭಾ ಗಾಯತ್ರಿ ಭವನದಲ್ಲಿ ಕತಗಾಲದ ಕಲಾಶ್ರೀ ಸಾಂಸ್ಕೃತಿಕ ವೇದಿಕೆ ಪ್ರಕಟಿಸಿದ ಸಂಕ್ಷಿಪ್ತ ಸಂಧ್ಯಾವಂದನೆ ಮತ್ತು ಪೂಜಾ ವಿಧಾನ ಪುಸ್ತಕವನ್ನು ಭಾನುವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಯೋಗ, ಆರೋಗ್ಯ, ಆಧ್ಯಾತ್ಮ, ತತ್ವಾಧಾರಿತ ವಿಷಯಗಳನ್ನು ಸೂರ್ಯೋಪಾಸನೆ ಎಂಬ ಈ ಚಿಕ್ಕ-ಚೊಕ್ಕ ಪುಸ್ತಕದಲ್ಲಿ ಪೋಣಿಸಲಾಗಿದೆ. ಸಕಾರಾತ್ಮಕ ಚಿಂತನೆಗೆ ಮತ್ತು ಸಮಾಜದ ಸಾಮರಸ್ಯ ಚಿಂತನೆಗೆ ಈ ಪುಸ್ತಕ ಸಹಕಾರಿಯಾಗಲಿದೆ ಎಂದರು.
ಬ್ರಾಹ್ಮಣ ಸಭಾ ಅಧ್ಯಕ್ಷ ಆರ್.ಡಿ. ಕುಲಕರ್ಣಿ ಮಾತನಾಡಿ, ಈಗಾಗಲೇ ಸಂಧ್ಯಾವಂದನೆ ಮತ್ತು ದೇವರ ಪೂಜೆ ಮಾಡುತ್ತಿರುವ ವಿಪ್ರರಿಗೂ ಈ ಪುಸ್ತಕ ಸ್ಪಷ್ಟತೆ ನೀಡಲಿದೆ. ಧಾರವಾಡ ತಾಲೂಕ ಬ್ರಾಹ್ಮಣ ಸಭಾ ಇಂತಹ ಜ್ಞಾನ-ಸಂಸ್ಕಾರ ಕಾರ್ಯಗಳಿಗೆ ಯಾವತ್ತೂ ಅನುಕೂಲಗಲಿದೆ ಎಂದರು.
ಸಂಪಾದಕ ಡಾ. ಕೆ. ಗಣಪತಿ ಭಟ್ಟ ಮಾತನಾಡಿ, ಮಾರ್ಕಂಡೇಯ ಪೂಜಾ ವಿಧಾನ ಅಳವಡಿಸಿದ್ದರಿಂದ ಸಕಲ ಹಿಂದೂ ಸಮಾಜದ ಸ್ತ್ರೀ-ಪುರುಷರಿಗೂ ಈ ಪುಸ್ತಕ ಮಾರ್ಗದರ್ಶಕವಾಗಲಿದೆ. ಉಪನಯನ ಸಂಸ್ಕಾರಕ್ಕೆ ಸಂಬಂಧಿಸಿದ ಅನೇಕ ವಿಷಯಗಳು ಇದ್ದು, ವೈದಿಕ ಸಮುದಾಯಕ್ಕೂ ಪ್ರೇರಕವಾಗಲಿದೆ. ವಿವಿಧ ಸಂದರ್ಭಗಳಲ್ಲಿ ಈ ಪುಸ್ತಕವನ್ನು ಕಾಣಿಕೆಯಾಗಿಯೂ ನೀಡಬಹುದಾಗಿದೆ ಎಂದರು.
ರಮೇಶ ಭಟ್ಟ ಮಾತನಾಡಿದರು. ಗಿರಿಜಾ ಜೋಶಿ, ವಿ.ವಿ ಯಾಜಿ, ಸುಜಾತಾ ಕುಲಕರ್ಣಿ, ಸುನಿತಾ ಹೊಂಕಣ, ಸುವರ್ಣಾ ದೇಸಾಯಿ, ಸಹನಾ ಜೋಶಿ, ಸುಮಂಗಲಾ ಭಟ್ಟ, ಭಾರತಿ ಹೆಗಡೆ, ಇತರರು ಇದ್ದರು.
ಪ್ರಶಾಂತ ಸ್ವಾಗತಿಸಿದರು. ವಿಶ್ವೇಶ ಪುರಾಣಿಕ ನಿರೂಪಿಸಿದರು. ರಾಜೀವ ಪಾಟಿಲ ಕುಲಕರ್ಣಿ ವಂದಿಸಿದರು.