

ನಂಜನಗೂಡು: ತಾಲೂಕಿನ ಸುತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ರಂಗಸ್ವಾಮಿ ಗುರುವಾರ ಅವಿರೋಧವಾಗಿ ಆಯ್ಕೆಯಾದರು.
ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಜಿ.ಮರಳ್ಳಿ ರಂಗಸ್ವಾಮಿ ಹೊರತುಪಡಿಸಿ ಬೇರ‌್ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಸುಭಾಷ್ ಅವರು ಅವಿರೋಧ ಆಯ್ಕೆಯನ್ನು ಘೋಷಿಸಿದರು.
ನೂತನ ಅಧ್ಯಕ್ಷ ರಂಗಸ್ವಾಮಿ ಮಾತನಾಡಿ, ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಿದದ ಸದಸ್ಯರಿಗೆ ಅಭಿನಂದನೆ. ಈ ಹಿಂದೆ ಗ್ರಾಪಂ ಸದಸ್ಯನಾಗಿ ಕೆಲಸ ಮಾಡಿದ್ದು, ಪ್ರಸ್ತುತ ಅಧ್ಯಕ್ಷನಾಗಿ ಆಯ್ಕೆಯಾಗಲು ಕಾರಣವಾಯಿತು. ಅಂಬೇಡ್ಕರ್ ಅವರ ಸಂವಿಧಾನದಿಂದ ರಾಜಕೀಯ, ಸಾಮಾಜಿಕವಾಗಿ ಬೆಳೆಯಲು ಅವಕಾಶ ದೊರೆಯಿತು. ಇದಕ್ಕಾಗಿ ನಾವು ಬಾಬಾ ಸಾಹೇಬರನ್ನು ಪ್ರತಿ ದಿನ ಸ್ಮರಿಸಬೇಕು ಎಂದು ಹೇಳಿದರು.
ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು, ರಸ್ತೆ, ಬೀದಿ ದೀಪ, ಚರಂಡಿ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಜಿಲ್ಲೆಯಲ್ಲೇ ಮಾದರಿ ಗ್ರಾಮ ಪಂಚಾಯಿತಿಯನ್ನಾಗಿ ಮಾಡಲು ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.
ಉಪಾಧ್ಯಕ್ಷೆ ರಾಣಿ, ಮಾಜಿ ಅಧ್ಯಕ್ಷ ರವಿ, ಮಾಜಿ ಉಪಾಧ್ಯಕ್ಷೆ ಮಾರುತಿ, ಸದಸ್ಯರಾದ ಮಹೇಶ್, ಅಂಬಿಕಾ, ಗೌರಮ್ಮ, ಚೌಡಮ್ಮ, ಜ್ಯೋತಿ, ಮೀನಾಕ್ಷಿ, ರಮೇಶ್, ಪರಮೇಶ್, ಪ್ರತಿಮಾ, ವಿಶ್ವನಾಥ್, ಪುಟ್ಟಮಾದಮ್ಮ, ನಾಗರಾಜು, ಲಕ್ಷ್ಮೀ, ಪಿಡಿಒ ಮಹದೇವಸ್ವಾಮಿ ಇತರರಿದ್ದರು.