ಪರಮಾತ್ಮನ ಅರಿಯಲು ಸತ್ಸಂಗ ಪೂರಕ

Satsang is a great way to understand the Supreme Being.
Satsang is a great way to understand the Supreme Being.
Published on

ಜಮಖಂಡಿ: ಬಸವಾದಿ ಶಿವಶರಣರು ಪರಿಶುದ್ಧವಾದ ಕಾಯಕ ಮಾಡಿ ತಮ್ಮ ಅನುಭವಕ್ಕೆ ತಂದುಕೊಂಡು, ಆನಂದಪಡುವ ಉಮೇದಿನಿಂದ ವಚನಗಳನ್ನು ರಚಿಸಿದ್ದಾರೆ ಎಂದು ಹಿಪ್ಪರಗಿಯ ಸಂಗಮೇಶ್ವರ ಮಠದ ಪ್ರಭುಜಿ ಬೆನ್ನಾಳಿ ಮಹಾರಾಜರು ಹೇಳಿದರು.

ನಗರದ ಐತಿಹಾಸಿಕ ಓಲೇಮಠದ ಆಶ್ರಯದಲ್ಲಿ ಬಸವ ಜಯಂತಿ ನಿಮಿತ್ತ ಏ.29ರ ವರೆಗೆ ಹಮ್ಮಿಕೊಂಡಿರುವ ಶರಣರ ವಚನ ಪ್ರವಚನ ಮತ್ತು ಸದ್ಭಾವನಾ ಪಾದಯಾತ್ರೆ ಅಂಗವಾಗಿ 9ನೇ ದಿನವಾದ ಬುಧವಾರ ಸಂಜೆ ನಡೆದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ದೇವರು ಕಾಣುವುದಿಲ್ಲ. ದೇವರಿಗೆ ರೂಪ, ಬಣ್ಣ, ಆಕಾರವಿಲ್ಲ. ದೇವರು ನಿರ್ಗುಣ, ನಿರಾಕಾರ, ಅವ್ಯಕ್ತನಿದ್ದಾನೆ. ದೇವರನ್ನು ಪರಮಸತ್ಯ ಎನ್ನುತ್ತಾರೆ. ಆತ್ಮವೇ ಸತ್ಯ. ಆತ್ಮವೇ ನಾನು. ಆತ್ಮ ಪರಮಾತ್ಮನ ಅಂಶ. ಪರಮಾತ್ಮನೇ ಆತ್ಮ. ತಾನೇ ಪರಮಾತ್ಮ ಎಂಬ ಸತ್ಯ ಅರಿಯಲು ಸತ್ಸಂಗದಲ್ಲಿ ಪಾಲ್ಗೊಳ್ಳಬೇಕು. ದೇವರನ್ನು ನೆನಪು ಮಾಡಿಕೊಳ್ಳಲು ವಚನಗಳು ಬೇಕು ಎಂದರು.

ಝುಂಜರವಾಡದ ಬಸವರಾಜೇಂದ್ರ ಶರಣರು ಪ್ರವಚನ ನುಡಿ ಹಂಚಿಕೊಳ್ಳುತ್ತ ಮಾತನಾಡಿ, ಮಕ್ಕಳ ಬೆಳವಣಿಗೆಯಲ್ಲಿ ತಾಯಿ ಪಾತ್ರ ಬಹಳ ದೊಡ್ಡದಿದೆ. ಆದರೆ, ಇಂದಿನ ತಾಯಂದಿರು ಮಕ್ಕಳಲ್ಲಿ ಧೈರ್ಯ ತುಂಬುವ ಕೆಲಸ ಮಾಡುತ್ತಿಲ್ಲ. ಆತ್ಮಸ್ಥೈರ್ಯ ತುಂಬುತ್ತಿಲ್ಲ. ಮಕ್ಕಳಿಗೆ ಸಂಸ್ಕಾರ ಕೊಡಲಾರದ್ದಕ್ಕೆ ಅನಾಥಾಶ್ರಮಗಳು ಹುಟ್ಟಿಕೊಳ್ಳುತ್ತಿವೆ. ಮಕ್ಕಳು ಅರಿತು ಆಚರಿಸುವಂತೆ ಮಾಡುವುದು ತಾಯಂದಿರ ಕೈಯಲ್ಲಿದೆ. ತಾಯಂದಿರು ಮಕ್ಕಳಲ್ಲಿ ಭವಿಷ್ಯ ಮತ್ತು ಕನಸು ಕಾಣಬೇಕು ಎಂದರು.

ಅರ್ಬನ್ ಬ್ಯಾಂಕ್ ಉಪಾಧ್ಯಕ್ಷ ಮಾಮೂನರಶೀದ್ ಪಾರ್ಥನಳ್ಳಿ ಮಾತನಾಡಿ, ಇಲ್ಲಿ ಎಲ್ಲರೂ ಭಾವೈಕ್ಯದಿಂದ್ದಾರೆ. ಸೌಹಾರ್ದದ ಬದುಕೇ ಸುಂದರ ಬದುಕು ಎಂದರು.

ಜಮಖಂಡಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಎ.ಆರ್. ಶಿಂಧೆ, ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಪಿ.ಬಿ. ಅಜ್ಜನವರ, ನಿವೃತ್ತ ಉಪಪ್ರಾಚಾರ್ಯ ಎನ್.ಬಿ. ಬಿರಾದಾರ ಮಾತನಾಡಿದರು.

ಸಾಹಿತಿ ಬಸವರಾಜ ಯಡಹಳ್ಳಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಏಗಪ್ಪ ಸವದಿ, ಮಲ್ಲಿಕಾರ್ಜುನ ಲಿಂಗನೂರ, ನಗರಸಭೆ ಸದಸ್ಯರಾದ ಪ್ರಶಾಂತ ಚರಕಿ, ಮಹಾನಂದಾ ಕಲೂತಿ, ಮಹಾನಂದಾ ಪಾಟೀಲ, ಜಯಶ್ರೀ ಪಾಟೀಲ ಇದ್ದರು.

ಶ್ರಾವಣಿ ಕೊಕಟನೂರ ಭರತನಾಟ್ಯ ಪ್ರದರ್ಶಿಸಿದರು. ಜಮಖಂಡಿ ಸೀಶಕ್ತಿ ಸಂಘದ ಸದಸ್ಯೆಯರಾದ ಪೂರ್ಣಿಮಾ ಮಾಳಿ, ಪ್ರತಿಭಾ ಅಕ್ಕಿ ಪರಿಸರ ಸಂರಕ್ಷಣೆಯ ಮಹತ್ವ ಕುರಿತು ಜಾಗೃತಿ ಮೂಡಿಸಿದರು.

ಗದುಗಿನ ಗವಾಯಿ ರವಿಕುಮಾರ ಬೆಣ್ಣಿ, ತಬಲಾ ವಾದಕ ಹನುಮಂತ ಅಂಕದ ಸಂಗೀತ ಸೇವೆ ಸಲ್ಲಿಸಿದರು. ವಾಣಿಶ್ರೀ ನಾವಿ, ವರ್ಷಾ ನಾವಿ ಸಹೋದರಿಯರು ಪ್ರಾರ್ಥನೆ ಗೀತೆ ಹಾಡಿದರು. ರಘು ಲಗಳಿ ಸ್ವಾಗತಿಸಿದರು. ಈರಪ್ಪ ಜಮಖಂಡಿ ನಿರೂಪಿಸಿದರು. ಓಲೇಮಠದ ಆನಂದ ದೇವರು ಶ್ರೀಗಳು ಶರಣು ಸಮರ್ಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net