

ವಿಜಯಪುರ: ಮಾನವ ಜನ್ಮ ಶ್ರೇಷ್ಠವಾದುದು. ಅದರ ಸದ್ಬಳಕೆ ಅಗಬೇಕು. ಸತ್ಕರ್ಮ, ಸತ್ಸಂಗ ಹಾಗೂ ಸದಾಚಾರ ಪಾಲಿಸಿದಾಗ ಬದುಕು ಬಂಗಾರವಾಗುತ್ತದೆ ಎಂದು ನಾಗಠಾಣ ಶಾಸಕ ವಿಠಲ ಕಟಕಧೋಂಡ ಹೇಳಿದರು.
ತಾಲೂಕಿನ ನಾಗಠಾಣ ಗ್ರಾಮದ ಹಿರೇಮಠದಲ್ಲಿ ಉದಯಲಿಂಗೇಶ್ವರ ಶಿವಯೋಗಿಗಳ ರಜತ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಧರ್ಮಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸನಾತನ ಸಂಸ್ಕೃತಿ, ಧಾರ್ಮಿಕತೆ ಮತ್ತು ಆಧ್ಯಾತ್ಮಿಕ ಚಿಂತನೆಯಿಂದ ಮಾನವ ಜನ್ಮ ಸಾರ್ಥಕಗೊಳ್ಳುತ್ತದೆ ಎಂದರು.
ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಮಾತನಾಡಿ, ಪ್ರತಿಯೊಬ್ಬರೂ ತಾಯಿ ಹಾಗೂ ಮನೆಯ ಹೆಣ್ಣು ಮಕ್ಕಳಿಗೆ ಗೌರವ ಕೊಡಬೇಕು. ಅದರಿಂದ ತಮ್ಮ ಮನೆ ದೇಗುಲವಾಗುತ್ತದೆ ಎಂದು ಸಲಹೆ ನೀಡಿದರು.
ನೇತೃತ್ವ ವಹಿಸಿದ್ದ ಸಿಂದಗಿಯ ಪ್ರಭುಸಾರಂಗದೇವ ಶಿವಾಚಾರ್ಯರು ಮಾತನಾಡಿ, ಪ್ರತಿದಿನ ಗುಡಿಗೆ ಹೋದರೆ ನೆಮ್ಮದಿ ಕಾಣಲು ಸಾಧ್ಯ ಎಂದರು.
ನಾಗಠಾಣದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಹಾವಿನಾಳದ ವಿಜಯ ಮಹಾಂತೇಶ ಶಿವಾಚಾರ್ಯರು, ಮನಗೂಳಿಯ ಅಭಿನವ ಸಂಗನಬಸವ ಶಿವಾಚಾರ್ಯರು ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಜಿ.ಪಂ.ಮಾಜಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಉದ್ಯಮಿ ಶರಣಬಸು ಅರಕೇರಿ ಮಾತನಾಡಿದರು. ಬನ್ನೂರಿನ ಸಿದ್ಧಲಿಂಗ ಶಿವಾಚಾರ್ಯರು, ಶರಣಬಸು ಪೂಜೇರಿ ವೇದಿಕೆಯಲ್ಲಿದ್ದರು.
ಕರ್ತೃಶ್ರೀ ಉದಯಲಿಂಗೇಶ್ವರ ಶಿವಯೋಗಿಗಳ ಗದ್ದುಗೆಗೆ ಮಹಾ ರುದ್ರಾಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚನೆ, ಹೋಮ ಹವನ,ಶಿವಯೋಗಿಗಳ ರಜತ ಮೂರ್ತಿಯ ಉತ್ಸವ, ಸುಮಂಗಲೆಯರ ಕುಂಭ, ಕಳಸ, ಪುಣೆಯ ವಿಶೇಷ ಡೋಲು ಕುಣಿತದೊಂದಿಗೆ ಮೆರವಣಿಗೆ ಜರುಗಿತು.
ಸಂತೋಷ ಬಂಡೆ, ಸುರೇಶ ಹೂಗಾರ, ಬಾಬು ಕೋಲಾರ ನಿರ್ವಹಿಸಿದರು.