

ಉಳ್ಳಾಗಡ್ಡಿ-ಖಾನಾಪುರ: ಯಮಕನಮರಡಿಯ ಎನ್‌ಎಸ್‌ಎಫ್ ಶಾಲೆ ಆವರಣದಲ್ಲಿ ಸತೀಶ ಜಾರಕಿಹೊಳಿ ಫೌಂಡೇಶನ್ ವತಿಯಿಂದ ನ.23 ಮತ್ತು 24 ರಂದು ಸಂಜೆ 5 ಗಂಟೆಗೆ 11ನೇ ಸತೀಶ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮುಖಂಡ ಕಿರಣಸಿಂಗ್ ರಜಪೂತ ತಿಳಿಸಿದರು.
ಸಮೀಪದ ಯಮಕನಮರಡಿ-ಹತ್ತರಗಿ ಎನ್‌ಎಸ್‌ಎಫ್ ಶಾಲೆಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂತಿಮ ಹಂತದ ಸ್ಫರ್ಧೆಗೆ 824 ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಅಂದಾಜು 10 ಲಕ್ಷ ರೂ. ಅಧಿಕ ಬಹುಮಾನ ಹಾಗೂ ಸತೀಶ ಟ್ರೋಫಿಗಳನ್ನು ನೀಡಲಾಗುತ್ತದೆ. ಜತೆಗೆ ವಿವಿಧ ಕ್ಷೇತ್ರಗಳ ಒಟ್ಟು 6 ಜನ ಸಾಧಕರನ್ನು ಸನ್ಮಾನಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಹುಕ್ಕೇರಿ, ಕಡೋಲಿ ಹಾಗೂ ಕಾಕತಿ ಜಿಪಂ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ 15,000 ರೂ. ನಗದು ಬಹುಮಾನ ನೀಡಿ ಗೌರವಿಸಲಾಗುವುದು ಎಂದರು.
ನಿಡಸೋಸಿ ಸಿದ್ಧಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಉಳ್ಳಾಗಡ್ಡಿ-ಖಾನಾಪುರ ಬ್ರಹನ್ಮಠದ ಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ಹುಣಸಿಕೊಳ್ಳಮಠದ ಸಿದ್ಧಬಸವ ದೇವರು, ಹತ್ತರಗಿಯ ಗುರುಸಿದ್ದೇಶ್ವರ ಸ್ವಾಮೀಜಿ, ಹರಿಮಂದಿರದ ಡಾ.ಆನಂದ ಮಹಾರಾಜರು, ಬಸವನ ಬೆಳವಿಯ ಶರಣಬಸ ದೇವರು ಆಗಮಿಸುವರು. ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಸಮಾರೋಪ ಭಾಷಣ ಮಾಡುವರು ಎಂದು ತಿಳಿಸಿದರು.
ಸುರೇಶ ಜೋರಾಪುರ, ರಿಯಾಜ ಚೌಗಲಾ, ಈರಣ್ಣ ಬಿಸಿರೊಟ್ಟಿ, ದಸ್ತಗೀರ ಬಸ್ಸಾಪುರೆ, ಶಶಿಕಾಂತ ಹಟ್ಟಿ, ಗೋವಿಂದ ದಿಕ್ಷಿತ, ಶಿವಗೌಡ ಅತ್ಯಾಳಿ, ಗಿರೀಶ ಮಿಶ್ರಕೋಟಿ, ರಾಜು ಮಾರ‌್ಯಾಳಿ, ಜೋಮಲಿಂಗ ಪಟೋಳಿ, ಗುಲಾಬಸಿಂಗ್ ರಜಪೂತ, ಸಮೀರ ಬೇಪಾರಿ ಇತರರಿದ್ದರು.