ಸಮುದಾಯಭವನಗಳಲ್ಲಿ ಶೈಕ್ಷಣಿಕ ತರಬೇತಿ

6myk1
Published on

ಮಾಯಕೊಂಡ: ರಾಜ್ಯದ ಕೆಲ ಸಮುದಾಯ ಭವನಗಳಲ್ಲಿ ವಿದ್ಯಾರ್ಥಿಗಳಿಗೆ ಐಎಎಸ್, ಐಪಿಎಸ್ ಸೇರಿ ಶೈಕ್ಷಣಿಕ ತರಬೇತಿ ಕೇಂದ್ರಗಳನ್ನು ಪ್ರಾರಂಭಿಸಲು ಚಿಂತನೆ ನಡೆಸಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.

ದಾವಣಗೆರೆ ತಾಲೂಕಿನ ಅಣಜಿ ಗ್ರಾಮದಲ್ಲಿ ಶುಕ್ರವಾರ ಮಹರ್ಷಿ ವಾಲ್ಮೀಕಿ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿದರು.

ಸಮುದಾಯ ಭವನಗಳು ಸದುದ್ದೇಶಕ್ಕೆ ನಿರಂತರ ಬಳಕೆ ಆಗಬೇಕೆಂಬುದು ಸರ್ಕಾರದ ಆಶಯ. ಆಗ ಅನುದಾನ ನೀಡಿದ್ದಕ್ಕೂ ಸಾರ್ಥಕವಾಗುತ್ತದೆ. ಶೈಕ್ಷಣಿಕ ತರಬೇತಿ ಕೇಂದ್ರಗಳನ್ನು ಆರಂಭಿಸಿದರೆ ನಮ್ಮ ಸದಾಶಯ ಸಾಕಾರವಾಗುತ್ತದೆ ಎಂದರು.

ವೃತ್ತಿಪರ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಹೋಗುವವರಿಗೆ ಸರ್ಕಾರ ಶೇ.75 ರಷ್ಟು ಸಹಾಯಧನ ನೀಡುತ್ತಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಕೆಐಡಿಬಿ ಹಾಗೂ ಕೆಎಸ್​ಎಫ್​ಸಿಯಿಂದ ಸಾಲ ಸೌಲಭ್ಯ ನೀಡುತ್ತಿದೆ ಎಂದು ತಿಳಿಸಿದರು.

ಎಸ್ಸಿ- ಎಸ್ಟಿ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಬಲೀಕರಣದ ಜತೆಗೆ ಶೋಷಿತ ಸಮಾಜಗಳನ್ನು ಮುಖ್ಯವಾಹಿನಿಗೆ ತರುವುದು ಅನಿವಾರ್ಯವಾಗಿದೆ. ಮಾಜಿ ಸಚಿವ ಎಚ್. ಆಂಜನೇಯ ಅವರು ಸಚಿವರಾಗಿದ್ದ ಅವಧಿಯಲ್ಲಿ ಸಮುದಾಯ ಭವನ, ಶಾಲಾ ಕಟ್ಟಡ ಹಾಗೂ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಅತ್ಯಧಿಕ ಅನುದಾನ ನೀಡಿದ್ದರು ಎಂದು ಸ್ಮರಿಸಿದರು.

ಮಾಯಕೊಂಡ ಕ್ಷೇತ್ರದ ವಿವಿಧ ಗ್ರಾಮಗಳ ರಸ್ತೆ ಅಭಿವೃದ್ಧಿಗೆ 30 ಕೋಟಿ ರೂ. ಅನುದಾನ ನೀಡಲಾಗಿದ್ದು, ಉತ್ತಮ ರಸ್ತೆಗಳು ನಿರ್ವಣಗೊಳ್ಳುತ್ತವೆ ಎಂದರು.

ಮಾಜಿ ಸಚಿವ ಎಚ್. ಆಂಜನೇಯ ಮಾತನಾಡಿ, ಉಳುವವನೇ ಭೂಮಿ ಒಡೆಯ ಎನ್ನುವ ಕಾಲದಲ್ಲಿ ಬಡ ರೈತರಿಗೆ ಭೂಮಿ ಒದಗಿಸಿಕೊಡಲು ಸಾಕಷ್ಟು ಹೋರಾಟ ನಡೆಸಿದ್ದೇನೆ. ಶೋಷಿತ ವರ್ಗಗಳ ಧ್ವನಿಯಾಗಿ ಸೈಕಲ್ ತುಳಿದು ಹಳ್ಳಿಹಳ್ಳಿಗೆ ತಿರುಗಿ ಜನಪರ ಹಾಗೂ ಸಾಮಾಜಿಕ ಕೆಲಸ ಮಾಡಿದ್ದೇನೆ ಎಂದರು

ಮುಖ್ಯಮಂತ್ರಿ ಸಿದ್ದರಾಮಯ್ಯ ಅಹಿಂದ ನಾಯಕರಾಗಲು ಸತೀಶ್ ಜಾರಕಿಹೊಳಿಯವರೇ ನೇರ ಕಾರಣ. ಸಿದ್ದರಾಮಯ್ಯ ಅವರನ್ನು ಕರೆದುಕೊಂಡು ಅಹಿಂದ ಸಮಾವೇಶ ಮಾಡುವ ಮೂಲಕ ರಾಜಕೀಯವಾಗಿ ಬೆಳೆಯಲು ಕಾರಣರಾದರು ಎಂದು ಸ್ಮರಿಸಿದರು.

ಒಳ ಮೀಸಲಾತಿ ನೀಡಲು ರಾಜ್ಯ ಸರ್ಕಾರ ಕಾರ್ಯೋನ್ಮುಖವಾಗಿದೆ, ಜಾತಿ ಸಮೀಕ್ಷೆ ಕೂಡ ನಡೆಯುತ್ತಿದೆ. ಜೂ.8 ರಂದು ಸಮೀಕ್ಷೆ ಮುಗಿಸಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ವರದಿ ಸಲ್ಲಿಸಿದಾಗ ಸರ್ಕಾರ ಒಳ ಮೀಸಲಾತಿ ್ನ ಜಾರಿಗೊಳಿಸುತ್ತದೆ ಎಂದರು.

ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ ಶ್ರೀಗಳು ಮಾತನಾಡಿ ಎಲ್ಲ ಗ್ರಾಮಗಳ ಸಾಮಾಜಿಕ ಪ್ರಗತಿಯಿಂದ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.

ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ, ಮಾಯಕೊಂಡ, ಆನಗೋಡು ಹೋಬಳಿಗಳ 22 ಕೆರೆ ತುಂಬಿಸುವ ಯೋಜನೆ ಪೈಪ್​ಲೈನ್ ಕಳಪೆಯಾಗಿದ್ದನ್ನು ಕೈ ಬಿಟ್ಟು ಹೊಸ ಪೈಪ್​ಲೈನ್​ಗೆ ಸರ್ಕಾರ 18 ಕೋಟಿ ರೂ. ಅನುದಾನ ನೀಡಿದೆ. ಟೆಂಡರ್ ಕರೆಯುವ ಹಂತದಲ್ಲಿದೆ ಎಂದರು.

ಮಾಯಕೊಂಡ ಗ್ರಾಮದ ಮದಕರಿ ನಾಯಕ ಸಮಾಧಿಯನ್ನು ಸಚಿವರು ವೀಕ್ಷಣೆ ಮಾಡಿದರು. ಮಾಯಕೊಂಡ ಹೋಬಳಿಯ ಗಂಗನಕಟ್ಟೆ, ನರಗನಹಳ್ಳಿ, ಬಾವಿಹಾಳ್, ಚಿನ್ನಸಮುದ್ರ, ಆನಗೋಡು ಹೋಬಳಿಯ ಕಾಟೇಹಳ್ಳಿ, ಗುಮ್ಮನೂರು ರಸ್ತೆಗಳ ಅಭಿವೃದ್ಧಿಗೆ ಭೂಮಿಪೂಜೆ ನೆರವೇರಿಸಿದರು.

ಮುಖಂಡರಾದ ಹದಡಿ ಹಾಲಪ್ಪ, ಜಿ. ವೀರಣ್ಣ, ಎಚ್.ಕೆ. ಚಂದ್ರಶೇಖರ್, ಜಿ. ಬಸಲಿಂಗಪ್ಪ, ಎಸ್. ಭೀಮಣ್ಣ ಮುದಿಗೌಡ್ರ, ಗಿರೀಶ್, ಜಿ.ಎಸ್. ಶ್ಯಾಮ್ ಮಲ್ಲಾಪುರ ದೇವರಾಜ್, ಬಿ.ಟಿ. ಸಿದ್ದಪ್ಪ, ಹೊದಿಗೆರೆ ರಮೇಶ್, ಹುಚ್ಚವ್ವನಹಳ್ಳಿ ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಟಿ. ಹನುಮಂತಪ್ಪ, ವಾಲ್ಮೀಕಿ ಸಮಾಜದ ಮುಖಂಡರು, ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net