ಇಡೇ ದೇಶಕ್ಕೆ ಕರ್ನಾಟಕ ಮಾದರಿ ಆಗುವುದು ಗ್ಯಾರಂಟಿ ಎಂದ ಸಚಿವ ಜಾರಕಿಹೊಳಿ

IMG_satish_Jarkiholi.jpg_4_1_5TAG0GKR.webp
Published on

ಬೆಳಗಾವಿ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನೀಡಿರುವ ಗ್ಯಾರಂಟಿಯನ್ನು ಬಹಳಷ್ಟು ರಾಜ್ಯಗಳು ಈಗಾಗಲೇ ಅನುಸರಿಸಲು ಸಿದ್ದತೆ ನಡೆಸಿವೆ. ದೇಶದ ಅಭಿವೃದ್ಧಿ ಹಾಗೂ ಜನಪರ ಆಡಳಿತಕ್ಕಾಗಿ ಕರ್ನಾಟಕ ಮಾದರಿ ಆಗಿ, ಇಡೀ ದೇಶಕ್ಕೆ ಕರ್ನಾಟಕ ಮಾದರಿ ಬರಲಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಜನರ ಕಲ್ಯಾಣಕ್ಕಾಗಿ ದೊಡ್ಡ ಮೊತ್ತ ವಿನಿಯೋಗಿಸುತ್ತದ್ದೇವೆ. ಅನವಶ್ಯಕ ಯೋಜನೆ ನಿಲ್ಲಿಸಿ, ಜನಪರ ಯೋಜನೆಗಳನ್ನು ಮುಂದುವರೆಸುತ್ತೇವೆ. ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದ್ದರಿಂದ ಬಿಜೆಪಿಗೆ ದಿಗ್ಬ್ರಮೆಗೊಂಡಿದೆ. ಚುನಾವಣೆ ಮುಗಿದ ತಕ್ಷಣವೇ ಬಿಜೆಪಿಗರು ಗ್ಯಾರಂಟಿಗಳ ಬೆನ್ನುಬಿದ್ದರು. ಅದನ್ನು ಈಡೇರಿಸಿದ ಬಳಿಕ ಜನರ ದಿಕ್ಕು ತಪ್ಪಿಸಲು ಗೋಹತ್ಯೆ ನಿಷೇಧ ಕಾಯ್ದೆಯ ಬಗ್ಗೆ ಹೋರಾಟದ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.

ಇನ್ನು ಐದು ವರ್ಷ ಬಿಜೆಪಿಯವರಿಗೆ ಏನೂ ಕೆಲಸವಿಲ್ಲ. ಹೋರಾಟ ಹೋರಾಟ ಗೆಲ್ಲೋವರೆಗೂ ಹೋರಾಟ ಎಂದು ಬೋರ್ಡ್  ಬರೆದಿಡಬೇಕಷ್ಟೇ. ಬಿಜೆಪಿಗರು ತಮ್ಮ ಆಡಳಿತಾವಧಿಯಲ್ಲಿ ಕೋಮುದ್ವೇಷದ ಬದಲಾಗಿ ಏನನ್ನೂ ಅಭಿವೃದ್ಧಿ ಮಾಡಿಲ್ಲ. ಈಗಲೂ ಅದನ್ನೇ ಮುಂದುವರಿಸಿದ್ದಾರೆ. ಮಾಡಲಿ ಬಿಡಿ ಎಂದು ವ್ಯಂಗ್ಯವಾಡಿದ ಅವರು, ಗ್ಯಾರಂಟಿಗಳ ಈಡೇರಿಕೆ ಈ ಬಾರಿ ಲೋಕಸಭೆಯಲ್ಲಿ ಕರ್ನಾಟಕದಲ್ಲಿ 20 ಸ್ಥಾನ ನಾವು ಗೆಲ್ಲಲು ಸಹಕಾರಿ ಆಗಲಿದೆ. ಈ ನಿಟ್ಟಿನಲ್ಲಿ ಇನ್ನೊಂದು ತಿಂಗಳಲ್ಲಿ ಸಭೆ ನಡೆಸಿ, ಲೋಕಸಭೆ ಅಭ್ಯರ್ಥಿಗಳ ಘೋಷಣೆ ಮಾಡುತ್ತೇವೆ ಎಂದರು.  

‘ಎಮ್ಮೆ-ಕೋಣ ಕಡಿಯಬಹುದಾದರೆ ಹಸುವನ್ನೇಕೆ ಕಡಿಯಬಾರದು? ಎಂಬ ಪಶುಸಂಗೋಪನಾ ಖಾತೆ ಸಚಿವ ಕೆ.ವೆಂಕಟೇಶ ಹೇಳಿಕೆ ಹಾಗೂ ಗೋಹತ್ಯೆ ನಿಷೇಧ ಕಾಯ್ದೆ ರದ್ದು ಮಾಡಿದರೆ ಉಗ್ರ ಹೋರಾಟ ಮಾಡುವುದಾಗಿ ಬಿಜೆಪಿ ನಾಯಕರು ಹೇಳಿರುವ’ ಕುರಿತಾದ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಚರ್ಚೆ ಮಾಡಲು ಸದನ ಇದೆ, ಕಾನೂನು ಅಲ್ಲಿ ತರಬೇಕು. ನಾವು ಏನೇ ಹೇಳಿಕೆ ಕೊಟ್ಟರೂ ಕಾನೂನು ಬರುವುದು ಸದನದಲ್ಲಿಯೇ. ಅವರ ಹೇಳಿಕೆಗೆ ಚರ್ಚೆ ಮಾಡಲು ಅವಕಾಶ ಇದೆ. ಸಾಧಕ ಬಾಧಕ ನೋಡಿ ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net