ಸರ್ಕಾರಿ ಸೇವೆ ತೃಪ್ತಿ ತಂದಿದೆ: ಜಗದೀಶ್

MDK03
Published on

ಮಡಿಕೇರಿ: ಸಮಯ ಪ್ರಜ್ಞೆ ಮತ್ತು ತಾಳ್ಮೆಯನ್ನು ವೃತ್ತಿ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಯಶಸ್ಸು ಸಾಧಿಸಬಹುದು ಎಂದು ಕೊಡಗು ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಎಸ್.ಜಗದೀಶ್ ಹೇಳಿದರು.


ನಗರದ ಜಿ.ಪಂ.ಕಚೇರಿ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಪಂಚಾಯಿತಿಯಲ್ಲಿ ಕಳೆದ ಒಂದು ವರ್ಷಗಳಿಂದ ಯೋಜನಾ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿ ವಯೋ ನಿವೃತ್ತಿ ಹೊಂದಿದ ಎಸ್.ಜಗದೀಶ್ ಮತ್ತು ಅಧೀಕ್ಷಕಿ ಪಿ.ಪಿ.ಇಂದಿರಾರವರಿಗೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.


೨೫ ವರ್ಷಕಾಲ ಸರ್ಕಾರಿ ಸೇವೆ ಸಲ್ಲಿಸಿದ್ದು ಖುಷಿ ತಂದಿದೆ. ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ವಿವಿಧ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿದ್ದು ಸಂತಸ ತಂದಿದೆ. ಸರ್ಕಾರಿ ವೃತ್ತಿಯಲ್ಲಿ ಸಮಯ ಪ್ರಜ್ಞೆ ಮತ್ತು ತಾಳ್ಮೆ ಬಹು ಮುಖ್ಯವಾದುದಾಗಿದೆ. ಇವೆರಡನ್ನು ಅಳವಡಿಸಿಕೊಂಡಲ್ಲಿ ವೃತ್ತಿ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂದರು.


ಅಧೀಕ್ಷಕ ಪಿ.ಪಿ.ಇಂದಿರಾ ಮಾತನಾಡಿ, ೩೫ ವರ್ಷಗಳ ಸರ್ಕಾರಿ ವೃತ್ತಿ ಜೀವನ ಸಾಕಷ್ಟು ತೃಪ್ತಿ ತಂದಿದ್ದು, ವೃತ್ತಿ ಜೀವನದಲ್ಲಿ ಸಹಕರಿಸಿದ ಎಲ್ಲಾ ಅಧಿಕಾರಿ ಸಿಬ್ಬಂದಿಗಳನ್ನು ಸ್ಮರಿಸಿದರು.


ಜಿ.ಪಂ.ಸಿಇಒ ವರ್ಣಿತ್ ನೇಗಿ ಮಾತನಾಡಿ, ನಿವೃತ್ತಿ ಎಂಬುದು ಸರ್ಕಾರಿ ನೌಕರರಿಗೆ ಕಡ್ಡಾಯವಾದುದಾಗಿದೆ. ಒತ್ತಡಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಿಕೊಂಡು ಕಾರ್ಯನಿರ್ವಹಿಸಬೇಕು. ನಿವೃತ್ತಿಯ ನಂತರವೂ ಕ್ರಿಯಾಶೀಲರಾಗಿರಬೇಕು ಎಂದರು.


ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ವರ್ಣಿತ್ ನೇಗಿರವರು, ವಯೋ ನಿವೃತ್ತಿ ಹೊಂದಿದ ಎಸ್.ಜಗದೀಶ್ ಮತ್ತು ಅಧೀಕ್ಷಕಿ ಪಿ.ಪಿ.ಇಂದಿರಾರವರನ್ನು ಸನ್ಮಾನಿಸಿ ಬೀಳ್ಕೊಡುಗೆ ನೀಡಿದರು.


ಈ ಸಂದರ್ಭದಲ್ಲಿ ಜಿ.ಪಂ.ಉಪ ಕಾರ್ಯದರ್ಶಿ ಜಿ.ಧನರಾಜು, ಜಿ.ಪಂ.ಮುಖ್ಯ ಲೆಕ್ಕಾಧಿಕಾರಿ ಝೀವಲ್ ಖಾನ್, ಸಹಾಯಕ ಯೋಜನಾಧಿಕಾರಿ ಜೀವನ್ ಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ರವೀಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net