ಪುರಾಣ ಶ್ರವಣದಿಂದ ಸಂತೃಪ್ತಿ ಪ್ರಾಪ್ತಿ

PURANA
Published on

ಲಕ್ಷ್ಮೇಶ್ವರ: ಸಿದ್ಧೇಶ್ವರ ಸತ್ಸಂಗ ಬಳಗ, ಕದಳಿ ಮಹಿಳಾ ವೇದಿಕೆ, ಶರಣ ಸಾಹಿತ್ಯ ಪರಿಷತ್, ರಾಜರಾಜೇಶ್ವರಿ ಮಹಿಳಾ ಸಾಹಿತ್ಯ ಮತ್ತು ಸಂಸ್ಕೃತಿ ವೇದಿಕೆ, ಅಕ್ಕಮಹಾದೇವಿ ಬಳಗ, ಪ್ರೇಮಕ್ಕ ಅಭಿಮಾನಿ ಬಳಗದ ಸಂಯುಕ್ತಾಶ್ರಯದಲ್ಲಿ ಜರುಗಿದ ಶ್ರಾವಣ ಸಂಜೆ ಕಾರ್ಯಕ್ರಮ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಶುಕ್ರವಾರ ಸಮಾರೋಪಗೊಂಡಿತು.

ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು, ‘ಶ್ರಾವಣ ಮಾಸದ ಪುಣ್ಯಕಾಲದಲ್ಲಿ ಪುರಾಣ, ಪುಣ್ಯಕಥೆ, ಪ್ರವಚನ, ಧರ್ಮ ಸಂದೇಶ, ತಿಳಿಯುವುದರಿಂದ ಮನಸಿನ ಬೇಗುದಿ ದೂರವಾಗಿ ಸಂತೃಪ್ತಿ ದೊರಕುತ್ತದೆ’ ಎಂದರು.

ಶಿಕ್ಷಕಿ ಮೈತ್ರಾದೇವಿ ಹಿರೇಮಠ ಮಾತನಾಡಿ, ಜನರ ಪದವೇ ಜನಪದ. ಜನರು ಸಹಜವಾಗಿ ನುಡಿಯುವ ಮಾತು, ಕೃತಿ, ಮನಸುಗಳು ಕಟ್ಟಿಕೊಂಡ ಮೌಲಿಕ ಅನುಭವ, ಅನುಭೂತಿ ಜನಪದವಾಗಿದೆ. ಇದನ್ನು ಯಾರು ಯಾವಾಗ ರಚಿಸಿದ್ದಾರೆ ಎಂಬುವುದಿಲ್ಲ. ಬಾಯಿಂದ ಬಾಯಿಗೆ ಹರಿದು ಬಂದಿದೆ. ತಲೆಮಾರಿನಿಂದ ತಲೆಮಾರಿಗೆ ಸಂಸ್ಕೃತಿಯ ಮೌಲ್ಯಗಳನ್ನು ಹೊತ್ತೊಯುತ್ತದೆ. ಮನುಜನಲ್ಲಿ ಪ್ರೀತಿ ಸಹನೆ ತಾಳ್ಮೆ ಸ್ನೇಹ ತ್ಯಾಗ ಇತ್ಯಾದಿ ಮೌಲ್ಯಗಳನ್ನು ಬಿತ್ತಿ ಸುಸಂಸ್ಕೃತ ಸಮಾಜ ಕಟ್ಟುವಲ್ಲಿ ಜನಪದ ಸಾಹಿತ್ಯ ಪ್ರಭಾವೀ ಮಾಧ್ಯಮವಾಗಿದೆ ಎಂದರು.

ಅಕ್ಕಾಮಹಾದೇವಿ ವೇಷ ಧರಿಸಿದ ಬಾಲಕಿ ವೈಶಾಲಿ ಅಯ್ಯಣ್ಣನವರ ಎಲ್ಲರ ಗಮನ ಸೆಳೆದಳು. ಸಾಹಿತಿ ಎಸ್.ವಿ. ಕಮ್ಮಾರ ಅಧ್ಯಕ್ಷತೆ ವಹಿಸಿದ್ದರು. ಅಂದಪ್ಪ ವಾಲಿಶೆಟ್ಟರ, ಶಿವಯೋಗಿ ಗಾಂಜಿ, ಪೂರ್ಣಾಜಿ ಕರಾಟೆ, ಸಿ.ಜಿ. ಹಿರೇಮಠ, ಗಂಗಾಧರ ಅರಳಿ, ನಿರ್ಮಲಾ ಅರಳಿ, ಪ್ರತಿಮಾ ಮಹಾಜನಶೆಟ್ಟರ, ಮಹಾನಂದ ಕೊಣ್ಣೂರ, ಲತಾ ತಟ್ಟಿ, ಶಾರದಾ ಬಟಗುರ್ಕಿ, ರತ್ನಾ ಅಂಗಡಿ, ರೇಖಾ ವಡಕಣ್ಣನವರ, ಶೋಭಾ ವಡಕಣ್ಣನವರ, ಅಂಕಿತಾ ಅರಳಿ, ಕಾಂಚನಾ ಹಸರೆಡ್ಡಿ, ವೀಣಾ ಕುಂಬಿ, ಅರುಂಧತಿ ಬಿಂಕದಕಟ್ಟಿ, ಮಧುಮತಿ ಹತ್ತಿಕಾಳ, ಗೀತಾ ಕೊಟಗಿ ಇತರರಿದ್ದರು. ರತ್ನಾ ಕರ್ಕಿ ನಿರೂಪಿಸಿದರು. ಅಶ್ವಿನಿ ಅಂಕಲಕೋಟಿ ಸ್ವಾಗತಿಸಿದರು. ಪಾರ್ವತಿ ಕಳ್ಳಿಮಠ ಪ್ರಾಥಿಸಿದರು. ಶೋಭಾ ಗಾಂಜಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net