

ಮಂಜುನಾಥ ತಿಮ್ಮಯ್ಯ ಮೈಸೂರು
ಇಲ್ಲಿ ವಿದ್ಯೆಯೊಂದಿಗೆ ದಾಸೋಹವೂ ಉಚಿತ…!
ಇದು ಸರ್ಕಾರಿ ಶಾಲಾ ಮಕ್ಕಳಿಗೆ ನೀಡುವ ಬಿಸಿಯೂಟ ಕಾರ್ಯಕ್ರಮದ ಭಾಗವಲ್ಲ. ಸಿಎಸ್‌ಆರ್ ಅನುದಾನ ಅಥವಾ ಯಾವುದೇ ಸಂಘ-ಸಂಸ್ಥೆ, ಉದ್ದಿಮೆಗಳಿಂದ ನೆರವು ಪಡೆಯದೆ ಸಂಪೂರ್ಣ ವೆಚ್ಚವನ್ನು ಅಧ್ಯಾಪಕರು ಭರಿಸಿರುವ ಕಾರ್ಯಕ್ರಮ….!
ಇಂತಹವೊಂದು ಸಕಾರಾತ್ಮಕ ಕೆಲಸ ನಗರದ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಸದ್ದಿಲ್ಲದೆ ನಡೆದುಕೊಂಡು ಬರುತ್ತಿದೆ. ಕಾಲೇಜಿನ ಬೋಧಕರು ಸ್ವಂತ ಹಣದಲ್ಲಿ ವಿದ್ಯಾರ್ಥಿನಿಯರಿಗೆ ಮಧ್ಯಾಹ್ನದ ಬಿಸಿಯೂಟ ನೀಡುವ ಮೂಲಕ ಮಾದರಿ ಎನಿಸಿದ್ದಾರೆ.
ನಿತ್ಯ ಊಟ ಬಡಿಸುವ ಮೂಲಕ ವಿದ್ಯಾರ್ಥಿನಿಯರನ್ನು ತೃಪ್ತಿಪಡಿಸುವ ಈ ಕಾರ್ಯಕ್ರಮಕ್ಕೆ ‘ಸಂತೃಪ್ತಿ’ ಎಂದು ಹೆಸರಿಡಲಾಗಿದೆ. ಇದು ಒಂದು ವರ್ಷ ಪೂರೈಸಿದೆ. ಈಗಲೂ ಇದು ನಿರ್ವಿಘ್ನವಾಗಿ ನಡೆದುಕೊಂಡು ಬರುತ್ತಿದೆ. ಈ ಕಾರ್ಯಕ್ರಮ ವಿದ್ಯಾರ್ಥಿಗಳು ಸೇರಿದಂತೆ ಕಾಲೇಜು ಶಿಕ್ಷಣ ಇಲಾಖೆ, ಉನ್ನತ ಶಿಕ್ಷಣ ಇಲಾಖೆ ಸಹ ಮೆಚ್ಚುಗೆ ವ್ಯಕ್ತಪಡಿಸಿ ಬೆನ್ನು ತಟ್ಟಿದೆ.
ಈ ಕಾಲೇಜಿಗೆ ದೂರದ ಊರುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಬರುತ್ತಾರೆ. ಬೆಳಗ್ಗೆ ಬಂದವರು ಮನೆಗೆ ಹೋಗುವ ಹೊತ್ತಿಗೆ ಸಂಜೆ ಆಗಿರುತ್ತದೆ. ಮಧ್ಯಾಹ್ನದ ವೇಳೆ ಊಟವಿಲ್ಲದೆ ಅನೇಕ ವಿದ್ಯಾರ್ಥಿಗಳು ಸಂಕಟ ಅನುಭವಿಸುತ್ತಿದ್ದರು. ಸುಸ್ತಾಗಿ ಬೀಳುವುದು, ತಲೆಸುತ್ತು ಎಂದು ಕೆಲ ವಿದ್ಯಾರ್ಥಿನಿಯರು ತರಗತಿಗೆ ಗೈರಾಗುತ್ತಿದ್ದರು. ಸಾಮಾನ್ಯ ಅನಾರೋಗ್ಯದ ಲಕ್ಷಣಗಳಿಗೂ ತುತ್ತಾಗಿ ವಿದ್ಯಾರ್ಥಿನಿಯರು ತೊಂದರೆ ಅನುಭವಿಸುತ್ತಿದ್ದರು. ಇದು ಹಸಿವಿನ ಕಾರಣ ಎಂದು ಅರಿತುಕೊಳ್ಳಲು ಹೆಚ್ಚಿನ ಸಮಯ ಹಿಡಿಯಲಿಲ್ಲ. ಇದನ್ನು ಗಮನಿಸಿದ ಅಧ್ಯಾಪಕರು ಸಭೆ ಸೇರಿ ಹಾಸ್ಟೆಲ್, ಸ್ಥಳೀಯ ವಿದ್ಯಾರ್ಥಿನಿಯರನ್ನು ಹೊರತುಪಡಿಸಿ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿನಿಯರಿಗೆ ಬಿಸಿಯೂಟ ನೀಡುವ ತೀರ್ಮಾನಕ್ಕೆ ಬಂದರು. ಹೀಗೆ ಚಿಗುರೊಡೆಯಿತು ಈ ‘ಸಂತೃಪ್ತಿ’ ಕಾರ್ಯಕ್ರಮ.
ಈ ಕಾರ್ಯಕ್ರಮಕ್ಕಾಗಿ ಸರ್ಕಾರ ಅಥವಾ ಸಂಘ-ಸಂಸ್ಥೆಗಳ ಸಹಾಯ ಪಡೆದುಕೊಳ್ಳಲಿಲ್ಲ. ಬದಲಿಗೆ ನಿತ್ಯ ಒಬ್ಬ ಅಧ್ಯಾಪಕರು ಬಿಸಿಯೂಟಕ್ಕೆ ತಗಲುವ ವೆಚ್ಚ ಭರಿಸುತ್ತಾರೆ. ಇದಕ್ಕೆ ಎಲ್ಲ ಅಧ್ಯಾಪಕರು ಸಹ ಕೈಜೋಡಿಸಿದರು. ಅನ್ನಸಾಂಬಾರ್, ಪಲಾವ್ ಹೀಗೆ ದಿನಕ್ಕೊಂದು ರೀತಿಯಲ್ಲಿ ಊಟ ಬಡಿಸಲಾಗುತ್ತಿದೆ. ನಿತ್ಯ 150 ರಿಂದ 200 ವಿದ್ಯಾರ್ಥಿಗಳು ಬಿಸಿಯೂಟದ ಲಾಭ ಪಡೆದುಕೊಳ್ಳುತ್ತಿದ್ದಾರೆ. ಮೆನು ದಿನಕ್ಕೊಂದು ಇರುತ್ತದೆ. ಇದೀಗ ವಿದ್ಯಾರ್ಥಿನಿಯರ ಮುಖದಲ್ಲಿ ಮಂದಹಾಸ ಮೂಡಿದ್ದು, ಊಟದ ಚಿಂತೆ ಬಿಟ್ಟು ಶಿಕ್ಷಣದ ಕಡೆ ಗಮನ ನೀಡುತ್ತಿದ್ದಾರೆ.
ವಿದ್ಯಾರ್ಥಿನಿಯರಿಗೆ ಮಧ್ಯಾಹ್ನದ ಊಟದ ಅಗತ್ಯವಿದೆಯೇ ಎಂಬುದನ್ನು ತಿಳಿಯಲು ಸರಳವಾದ ಮಾನದಂಡ ರೂಪಿಸಲಾಗಿದೆ. ವಿದ್ಯಾರ್ಥಿನಿಯರನ್ನು ಕೌನ್ಸೆಲಿಂಗ್ ಮಾಡಲಾಗುತ್ತದೆ. ದೂರದ ಊರುಗಳಿಂದ ಬರುವವರು, ಗ್ರಾಮಾಂತರ ಪ್ರದೇಶ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳನ್ನು ಪರಿಗಣಿಸಲಾಗುತ್ತಿದೆ. ಇದಕ್ಕಾಗಿ ಒಂದು ಗ್ರೂಪ್ ಸಹ ಮಾಡಲಾಗಿದೆ. ಇವರೊಂದಿಗೆ ಅಗತ್ಯ ಇರುವ ಈ ಕಾಲೇಜಿನ ವಿದ್ಯಾರ್ಥಿನಿಯರು ಕೂಡ ಊಟ ಮಾಡಬಹುದು.
ಬೆಳಗ್ಗೆ 8 ಗಂಟೆಗೆ ತರಗತಿಗಳು ಆರಂಭವಾಗುತ್ತವೆ. ಮೊದಲ ತರಗತಿಗೆ ಬರುವ ವಿದ್ಯಾರ್ಥಿನಿಯರು ಬೆಳಗ್ಗೆ ತಿಂಡಿಯನ್ನೂ ತಿನ್ನಲಾಗದು. ಮಧ್ಯಾಹ್ನದ ಊಟವೂ ಇಲ್ಲದೇ ಇಡೀ ದಿನ ಪಾಠ ಕೇಳಲಾಗದು. ಕೆಲವು ವಿದ್ಯಾರ್ಥಿನಿಯರ ಸಂಕಷ್ಟವನ್ನು ಅರಿತ ಅಧ್ಯಾಪಕರು ಊಟ ಕೊಡುವ ಮೂಲಕ ವಿದ್ಯಾಭ್ಯಾಸಕ್ಕೆ ನೆರವಾಗಿದ್ದಾರೆ. ವಿದ್ಯಾರ್ಥಿನಿಯರ ಮನದಲ್ಲಿ ‘ಸಂತೃಪ್ತಿ’ ಮೂಡಿದೆ.
‘ಸಂತೃಪ್ತಿ’ಯಿಂದ ವಿದ್ಯಾರ್ಥಿನಿಯರ ಆರೋಗ್ಯದ ಸಮಸ್ಯೆಗಳು ಸುಧಾರಿಸಿವೆ. ನಿರಾಂತಕವಾಗಿ ತರಗತಿಯಲ್ಲಿ ಭಾಗವಹಿಸಲು ಅಧ್ಯಯನದಲ್ಲಿ ತೊಡಗಲು ನೆರವಾಗಿದೆ ಎಂದು ವಿದ್ಯಾರ್ಥಿನಿಯರು ಸಂತಸವ್ಯಕ್ತಪಡಿಸುವುದರ ಜತೆಗೆ ಅಧ್ಯಾಪಕರಿಗೆ ಧನ್ಯವಾದ ಸಮರ್ಪಿಸುತ್ತಾರೆ.
ಕೇವಲ ಬೋಧನೆಗಷ್ಟೇ ಸೀಮಿತರಾಗದ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಅಧ್ಯಾಪಕರ ಉದಾರ ಕಾರ್ಯಕ್ಕೆ ಶೈಕ್ಷಣಿಕ ವಲಯದಲ್ಲಿಯೂ ಮೆಚ್ಚುಗೆ ವ್ಯಕ್ತವಾಗಿದೆ. ಕಾಲೇಜು ಶಿಕ್ಷಣ ಇಲಾಖೆ, ಉನ್ನತ ಶಿಕ್ಷಣ ಇಲಾಖೆ ಸಹ ಪ್ರಶಂಸಿಸಿದ್ದು, ಉತ್ತಮ ಕಾರ್ಯವಾಗಿರುವ ಇದನ್ನು ಹೀಗೆ ಮುಂದುವರಿಸಿಕೊಂಡು ಹೋಗಲು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಬಿಸಿಯೂಟಕ್ಕೆ ಆಗುವ ವೆಚ್ಚದ ಹಣವನ್ನು ಅಧ್ಯಾಪಕರು ಸ್ವಯಂ ಪ್ರೇರಣೆಯಿಂದ ನೀಡುತ್ತಾರೆ. ಹೊರಗಿನವರು ನೆರವು ನೀಡಲು ಮುಂದೆ ಬಂದರೂ ಅವಕಾಶ ನೀಡಿಲ್ಲ ಎಂದು ಪ್ರಾಂಶುಪಾಲ ಪ್ರೊ.ಎಂ.ಅಬ್ದುಲ್ ರಹಿಮಾನ್ ತಿಳಿಸಿದರು.
‘ಸಂತೃಪ್ತಿ’ಗಾಗಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ವತಿಯಿಂದ ಸಮಿತಿಯೊಂದನ್ನು ರಚಿಸಲಾಗಿದೆ. ಇದು ನಿರ್ವಹಣೆ ಮಾಡುತ್ತದೆ. ಆಯಾ ದಿನದ ಖರ್ಚು ಯಾರು ಭರಿಸಬೇಕು ಎಂಬುದರ ಕುರಿತು ಪಟ್ಟಿ ಮಾಡಲಾಗಿದೆ. ಸರದಿ ಪ್ರಕಾರ, ಆಯಾ ಅಧ್ಯಾಪಕರು ಹಣ ಪಾವತಿಸುತ್ತಾರೆ. ನೂರು ಜನ ಅಧ್ಯಾಪಕರಿದ್ದಾರೆ. ಮೂರು ತಿಂಗಳಿಗೆ ಒಮ್ಮೆ ಒಬ್ಬ ಪ್ರಾಧ್ಯಾಪಕರ ಸರದಿ ಬರುತ್ತದೆ ಎಂದು ತಿಳಿಸಿದರು.
ಕಳೆದ ವರ್ಷ ಬಿಸಿಯೂಟ ಆರಂಭಿಸಲಾಯಿತು. ಈಗಲೂ ಮುಂದುವರಿಸಿಕೊಂಡು ಬರಲಾಗುತ್ತದೆ. ‘ಸಂತೃಪ್ತಿ’ಗೆ ವಿದ್ಯಾರ್ಥಿನಿಯರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಯಾವುದೇ ಸಮಸ್ಯೆಗಳು ಎದುರಾಗಿಲ್ಲ. ನಮ್ಮ ಕಾಲೇಜಿನ ವಿದ್ಯಾರ್ಥಿನಿಯರಿಗೆ ಹೆಚ್ಚಿನ ಅನುಕೂಲವಾಗಿದೆ ಎಂದು ತಿಳಿಸಿದರು.