ಪಾರಣೆಯಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

13.npk-3
ಪಾರಣೆ ಜಿಎಂಪಿ ಶಾಲೆಯಲ್ಲಿ ಆಯೋಜಿಸಿದ್ದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಮಾಜಿ ಸೈನಿಕ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ವಿ.ಎಂ. ಸುಬ್ರಮಣಿ ಉದ್ಘಾಟಿಸಿದರು.
Published on

ನಾಪೋಕ್ಲು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ವಿರಾಜಪೇಟೆ ತಾಲೂಕು ಮೂರ್ನಾಡು ವಲಯದ ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ಪಾರಣೆ ಜಿಎಂಪಿ ಶಾಲೆಯಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಮಾಜಿ ಸೈನಿಕ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ವಿ.ಎಂ. ಸುಬ್ರಮಣಿ ಅವರು ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಧರ್ಮಸ್ಥಳ ಯೋಜನೆ ಕಾರ್ಯಕ್ರಮಗಳು ಜನರ ಬೆಳವಣಿಗೆ ಹಾಗೂ ಸಮಾಜಮುಖಿ ಚಿಂತನೆಯಿಂದ ಕೂಡಿರುತ್ತದೆ. ಹಿಂದೆ ಊರಿನ ಜನರು ಒಗ್ಗೂಡಿಸಲು ಈ ಪೂಜಾ ಕಾರ್ಯಕ್ರಮ ಮಾಡುತ್ತಿದ್ದರು. ಈಗ ಈ ರೀತಿ ಪೂಜೆಗಳು ಕಂಡುಬರುವುದು ಅಪರೂಪವಾಗಿದೆ ಎಂದು ತಿಳಿಸಿದರು.

ವಿರಾಜಪೇಟೆ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಹರೀಶ್.ಪಿ ಮಾತನಾಡಿ, ಯೋಜನೆಯಲ್ಲಿ ಹತ್ತು ಹಲವು ಸಮಾಜಮುಖ ಕಾರ್ಯಗಳು ನಡೆಸಿದ್ದು, ಇವುಗಳಲ್ಲಿ ಜ್ಞಾನದೀಪ ಶಿಕ್ಷಕರ ಆಯ್ಕೆ, ಮಾಸಾಶನ, ಸುಜ್ಞಾನಿಧಿ ವೇತನ, ಹಿಂದು ರುದ್ರಭೂಮಿ ಜೀರ್ಣೋದ್ಧಾರ, ಕೆರೆಗಳ ಪುನಶ್ಚೇತನಕ್ಕೆ ಅನುದಾನವನ್ನು ಕ್ಷೇತ್ರದ ವತಿಯಿಂದ ನೀಡಲಾಗುತ್ತಿದೆ ಎಂದು ತಿಳಿಸಿದರು.

ತಾಪಂ ಮಾಜಿ ಸದಸ್ಯರಾದ ಉಮಾ ಪ್ರಭು ಮಾತನಾಡಿ, ಸತ್ಯನಾರಾಯಣ ಪೂಜೆ ನಮ್ಮ ಸನಾತನ ಸಂಸ್ಕೃತಿಯಾಗಿದ್ದು, ಎಲ್ಲ ಸದಸ್ಯರು ಹಾಗೂ ಊರಿನ ಜನರು ಪಾಲ್ಗೊಳ್ಳಬೇಕು ಹಾಗೂ ಯೋಜನೆಯ ಕಾರ್ಯಕ್ರಮಗಳಿಗೆ ಶುಭ ಹಾರೈಸಿದರು.

ಪಾರಣೆ ಪಂಚಾಯಿತಿ ಅಧ್ಯಕ್ಷ ಕಟ್ಟಿ ಕುಶಾಲಪ್ಪ, ಪೂಜಾ ಸಮಿತಿ ಅಧ್ಯಕ್ಷ ಬಿ.ಎಸ್.ಮೋಹನ್ ಮಾತನಾಡಿದರು. ವೇದಪ್ರಸಾದ್, ಮಂಜು ಮಾಚಯ್ಯ, ಕಾದಿರ ನಿಶಾ ಪಳಂಗಪ್ಪ, ಬೊಳ್ಳಚೆಟ್ಟೀರ ಪ್ರಕಾಶ್ ಕಾಳಪ್ಪ, ಬಲ್ಯಟಂಡ ಕೌಶಿ, ವಲಯದ ಮೇಲ್ವಿಚಾರಕ ಪ್ರತಾಪ್ ದೇವಾಡಿಗ, ಕೃಷಿ ಮೇಲ್ವಿಚಾರಕ ವಸಂತ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net