

ಮಂಗಳೂರು : ರೈಲ್ವೇ ಹಳಿಗಳ ಹಾನಿಗೊಳಿಸಿದ್ದ ಪ್ರಕರಣದ ಬಗ್ಗೆ ಕಾಂಗ್ರೆಸ್ ನಾಯಕರು ಸುದ್ದಿಗೋಷ್ಠಿಯಲ್ಲಿ ನೀಡಿದ ಬಾಲಿಶ ಹೇಳಿಕೆಯನ್ನು ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಖಂಡಿಸಿದ್ದಾರೆ.
ಉತ್ತರ ಭಾರತದ ಕಾರ್ಮಿಕರು ಈ ಕೃತ್ಯ ಎಸಗಿದ್ದಾರೆ ಎಂದು ಉಲ್ಲೇಖಿಸಿರುವ ಕಾಂಗ್ರೆಸ್ ನಾಯಕರು ಅಲ್ಲೆಲ್ಲಾ ಬಿಜೆಪಿ ಸರ್ಕಾರವೇ ಇದೆ. ಇದು ಬಿಜೆಪಿಯವರ ಕೆಲಸ ಆಗಿರಬಹುದು ಎಂಬ ಬಾಲಿಶವಾದ ಹೇಳಿಕೆ ನೀಡಿದ್ದಾರೆ. ವಿಧಾನ ಸೌಧದ ಒಳಗೆ ಪಾಕಿಸ್ತಾನಕ್ಕೆ ಜೈಕಾರ ಹಾಕಿದ ಕಾಂಗ್ರೆಸ್ ಕಾರ್ಯಕರ್ತರ ಪರವಾಗಿ ನಿಂತಿದ್ದ ಈ ಕಾಂಗ್ರೆಸ್ ನಾಯಕರು ಈಗ ಬಿಜೆಪಿ ಹಗುರವಾಗಿ ಮಾತನಾಡಿದ್ದು ಹಾಸ್ಯಾಸ್ಪದ. ದೇಶಾದ್ಯಂತ ರೈಲ್ವೇ ಹಳಿಗಳ ಮೇಲೆ ಭಯೋತ್ಪಾದನಾ ಕೃತ್ಯ ನಡೆಯುತ್ತಿರುವ ಈ ಸಂದರ್ಭವನ್ನು ಕಾಂಗ್ರೆಸ್ ತನ್ನ ಕೊಳಕು ರಾಜಕೀಯಕ್ಕಾಗಿ ಬಳಸಿಕೊಂಡಿದ್ದನ್ನು ನೋಡಿದರೆ, ಕಾಂಗ್ರೆಸ್ ರಾಜಕೀಯವಾಗಿ ದಿವಾಳಿ ಹಂತಕ್ಕೆ ತಲುಪಿದೆ ಎನ್ನುವದು ಸ್ಪಷ್ಟವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ರೈಲ್ವೇ ಹಳಿಗಳ ಮೇಲೆ ದುಷ್ಕೃತ್ಯವನ್ನು ಮೆರೆದು ಪ್ರಯಾಣಿಕರ ಜೀವದ ಮೇಲೆ ಚೆಲ್ಲಾಟವಾಡುತ್ತಿರುವ ರಾಷ್ಟ್ರದ್ರೋಹಿಗಳನ್ನು ಶೀಘ್ರದಲ್ಲಿ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸತೀಶ್ ಕುಂಪಲ ಆಗ್ರಹಿಸಿದ್ದಾರೆ.